ಜೈಲಿನಿಂದ ಪರಾರಿಯಾಗಿದ್ದ 8 ಸಿಮಿ ಉಗ್ರರ ಎನ್ಕೌಂಟರ್ (test)22

ಮಧ್ಯಪ್ರದೇಶ ರಾಜಧಾನಿ ಭೋಪಾಲ್ ಸೆಂಟ್ರಲ್ ಜೈಲಿನಿಂದ ಪರಾರಿಯಾದ 8 ಜನ ಸಿಮಿ ಉಗ್ರರು ಪೊಲೀಸರ ಎನ್ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾರೆ. ಬಿಗಿ ಭದ್ರತೆಯ ಜೈಲಿನಿಂದ ಸಿಮಿ(ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ) ಸಂಘಟನೆಯ 8 ಸದಸ್ಯರು ಭಾನುವಾರ ಮಧ್ಯರಾತ್ರಿಯ ನಂತರ ಜೈಲು ಸಿಬ್ಬಂದಿಯನ್ನು ಕೊಂದು ತಪ್ಪಿಸಿಕೊಂಡಿದ್ದರು. ನಂತರ ಕೆಲವೇ ಗಂಟೆಗಳಲ್ಲಿ ಪೊಲೀಸರ ದಾಳಿಯಲ್ಲಿ ಹತರಾದರು. ಆದರೆ ಇಂದು ನಕಲಿ ಎನ್ಕೌಂಟರ್, ಸಿಮಿ ಕಾರ್ಯಕರ್ತರನ್ನು ಹಿಡಿದು ಗುಂಡಿಟ್ಟು ಕೊಂದಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ.

ಸಿಮಿ ಕಾರ್ಯಕರ್ತರು 8 ಜನ ವಿಚಾರಣಾಧೀನ ಖೈದಿಗಳಾಗಿ ಜೈಲಿನಲ್ಲಿ ಒಂದೇ ಸೆಲ್ ನಲ್ಲಿದ್ದರು, ಭಾನುವಾರ ಎಲ್ಲರೂ ದೀಪಾವಳಿ ಸಂಭ್ರಮದಲ್ಲಿ ಮುಳುಗಿದ್ದಾಗ ಮಧ್ಯರಾತ್ರಿಯ ನಂತರ 2-3 ಗಂಟೆಯ ನಡುವೆ ಜೈಲು ಗಾರ್ಡ್‌ನನ್ನು ಕೊಂದು ಜೈಲಿನಿಂದ ತಪ್ಪಿಸಿಕೊಂಡರು ಎಂದು ಭೂಪಾಲ್ ಡಿಐಜಿ ರಾಮನ್ ಸಿಂಗ್ ಹೇಳಿದ್ದಾರೆ. ಚಮಚ, ತಟ್ಟೆಗಳನ್ನು ಹರಿತವಾದ ಆಯುಧಗಳಂತೆ ಬಳಸಿ ಒಬ್ಬ ಗಾರ್ಡ್ ನನ್ನು ಕೊಂದು ಮತ್ತೊಬ್ಬರನ್ನು ಕಟ್ಟಿಹಾಕಿ ತಮ್ಮ ಬೆಡ್ ಶೀಟ್ ಗಳನ್ನೇ ಹಗ್ಗದಂತೆ ಕಟ್ಟಿ ಅದರ ಸಹಾಯದಿಂದ ಗೋಡೆ ಹಾರಿ ತಪ್ಪಿಸಿಕೊಂಡರೆಂದು ಅವರು ಹೇಳಿದ್ದಾರೆ. ಈ 8 ಜನರಲ್ಲಿ ಇಬ್ಬರು ಮೂರು ವರ್ಷಗಳ ಹಿಂದೆ ಖಾಂದ್ವಾದಲ್ಲಿಯೂ ಇದೇ ರೀತಿ ಜೈಲಿನಿಂದ ಪರಾರಿಯಾಗಿ ನಂತರ ಸಿಕ್ಕಿಬಿದ್ದಿದ್ದರು.

ಈ ಘಟನೆಯಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಪರಾರಿಯಾದ ಸಿಮಿ ಸದಸ್ಯರಿಗಾಗಿ ಹುಡುಕಾಟ ನಡೆಸಿತ್ತು. ಪ್ರತಿಯೊಬ್ಬರ ತಲೆಗೆ ರೂ. 5 ಲಕ್ಷ ಬಹುಮಾನವೂ ಘೋಷಿಸಿತ್ತು. ನಂತರ ಕೆಲವೇ ಗಂಟೆಗಳಲ್ಲಿ ಜೈಲಿನಿಂದ 10 ಕಿಮೀ ದೂರದ ಮಾಲಿಖೇಡಾ ಗ್ರಾಮದಲ್ಲಿ ಈ 8 ಜನರು ಅಡಗಿರುವುದು ಸ್ಥಳೀಯರಿಂದ ಮಾಹಿತಿ ಬಂದಿತ್ತು. ಪೊಲೀಸ್ ವಿಭಾಗದ ಉಗ್ರ ನಿಗ್ರಹ ತಂಡ, ಭಯೋತ್ಪಾದಕ ನಿಗ್ರಹ ಸ್ಕ್ವಾಡ್ ಗಳು ಸೋಮವಾರ ಬೆಳಗ್ಗೆ ಅವರನ್ನು ಸುತ್ತುವರೆದಾಗ ಸಿಮಿ ಕಾರ್ಯಕರ್ತರು ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದು, ಆತ್ಮರಕ್ಷಣೆಗಾಗಿ ಪೊಲೀಸರು ಅವರನ್ನು ಗುಂಡಿಟ್ಟು ಹತ್ಯೆ ಮಾಡಿದರು ಎಂದು ಡಿಐಜಿ ಹೇಳಿದ್ದಾರೆ. ಉಗ್ರರು ಟೂಥ್ ಬ್ರಷ್, ಮರದ ತುಂಡಿನಿಂದ ಮಾಡಿದ್ದ ಕೀ ಬಳಸಿ ಜೈಲು ಕೊಠಡಿಯ ಬೀಗ ತೆರೆದಿದ್ದಾರೆಂದು ಡಿಐಜಿ ಹೇಳಿದ್ದಾರೆ. ಚಮಚ ಮತ್ತು ತಟ್ಟೆಗಳನ್ನು ಹರಿತವಾದ ಆಯುಧಗಳಂತೆ ಮಾಡಿ ಪೊಲೀಸರ ಮೇಲೆ ದಾಳೊ ನಡೆಸಿದರೆಂದು ರಾಜ್ಯ ಗೃಹಸಚಿವ ಭೂಪೇಂದ್ರ ಸಿಂಗ್ ಹೇಳಿದ್ದಾರೆ. ಆದರೆ ಅವರು ಹರಿತವಾದ ಮಾರಕಾಸ್ತ್ರಗಳನ್ನು ಬಳಸಿದ್ದರೆಂದೂ, ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದರೆಂದೂ ಐಜಿ ಯೋಗೇಶ್ ಚೌದರಿ ಹೇಳಿದ್ದಾರೆ.

ಸಿಮಿ ಕಾರ್ಯಕರ್ತರು ಜೈಲಿನಿಂದ ಪರಾರಿಯಾಗುವಾಗ ಹತ್ಯೆಯಾಗಿರುವ ಹೆಡ್ ಕಾನ್ಸ್‌ಟೇಬಲ್ ರಮಾಶಂಕರ್ ಯಾದವ್ ಮಗಳ ವಿವಾಹ ಡಿಸೆಂಬರ್ 9 ರಂದು ನಡೆಯಬೇಕಿತ್ತು. ಈಗ ಅತನ ಹತ್ಯೆಯಿಂದ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ. ರಮಾಶಂಕರ್ ರವರ ಇಬ್ಬರು ಪುತ್ರರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.