ಎಟಿಎಂ ನಲ್ಲಿ 100 ರ ಬದಲು 500 ರ ನೋಟುಗಳು ಬಂದಾಗ!

ಹೈದರಾಬಾದ್: ನಗರದ ಎಟಿಎಂ ಒಂದರಲ್ಲಿ ಗ್ರಾಹಕರು ರೂ. 100 ಡ್ರಾ ಮಾಡಲು ಹೊರಟರೆ 100 ರ ಬದಲು 500 ರ ನೋಟುಗಳನ್ನು ನೀಡುತ್ತಿದೆ. ಈ ವಿಚಿತ್ರ ಘಟನೆ ಶಂಷಾಬಾದ್ ನ ಖಾಸಗಿ ಬ್ಯಾಂಕ್ ಎಟಿಎಂ ನಲ್ಲಿ ನಡೆದಿದೆ. ಇದನ್ನು ನೋಡಿದ ಜನ ಎಟಿಎಂ ಮುಂದೆ ಜಮಾಯಿಸಿ ಎಲ್ಲಾ ಸೇರಿ ರೂ.8 ಲಕ್ಷದವರೆಗೂ ಡ್ರಾ ಮಾಡಿಕೊಂಡು ಹೋಗಿದ್ದಾರೆ. ತಾಂತ್ರಿಕ ಲೋಪದ ಕಾರಣ ಹೀಗೆ ನಡೆದಿದೆ ಎಂದು ಬ್ಯಾಂಕ್ ಸಿಬ್ಬಂದಿ ಹೇಳಿದ್ದಾರೆ.

ಶಂಷಾಬಾದ್ ವಿಮಾನ ನಿಲ್ದಾಣದ ಕೊಟಕ್ ಮಹೀಂದ್ರ ಬ್ಯಾಂಕಿನ ಎಟಿಎಂ ನಲ್ಲಿ ಡಿಸೆಂಬರ್ 24 ರ ಸಂಜೆ ವ್ಯಕ್ತಿಯೊಬ್ಬ ರೂ.2500 ಡ್ರಾ ಮಾಡಲು ಯತ್ನಿಸಿದಾಗ ಒಂದು 2000 ಮುಖಬೆಲೆಯ ನೋಟು ಬಂದಿದೆ, ಉಳಿದ 500 ರೂಪಾಯಿಗೆ 100 ರ ಐದು ನೋಟು ಬಂದಿದೆ. ಒಟ್ಟು 4500 ರೂ.ಗಳನ್ನು ಆ ವ್ಯಕ್ತಿ ಡ್ರಾ ಮಾಡಿಕೊಂಡು ಹೋಗಿದ್ದಾನೆ.

ಈ ವಿಷಯ ತಿಳಿದ ಸ್ವಲ್ಪ ಸಮಯದಲ್ಲೇ ಎಟಿಎಂ ಎದುರು ಜನ ಸಾಲುಗಟ್ಟಿ ನಿಂತುಬಿಟ್ಟಿದ್ದರು. ಎಲ್ಲಾ ಹೀಗೆ 100 ರ ಬದಲು 500 ರ ನೋಟುಗಳನ್ನು ಡ್ರಾ ಮಾಡಿಕೊಂಡು ಹೊರಟರು. ಸುಮಾರು 40 ನಿಮಿಷಗಳ ಕಾಲ ಹೀಗೆ ನಡೆಯಿತು. ನಂತರ ಇದನ್ನು ಗಮನಿಸಿದ ಏರ್ಪೋರ್ಟ್ ಅಧಿಕಾರಿಗಳು ಬ್ಯಾಂಕ್ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದರು. ನಂತರ ಎಟಿಎಂ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು.