ಕೇಂದ್ರದಿಂದ ಯಾವ ಹಣ ಅಭಿವೃದ್ಧಿಗೆ ಬಳಕೆಯಾಗಿದೆ : ಡಾ.ಜಿ.ಪರಮೇಶ್ವರ್ ಪ್ರಶ್ನೆ – News Mirchi

ಕೇಂದ್ರದಿಂದ ಯಾವ ಹಣ ಅಭಿವೃದ್ಧಿಗೆ ಬಳಕೆಯಾಗಿದೆ : ಡಾ.ಜಿ.ಪರಮೇಶ್ವರ್ ಪ್ರಶ್ನೆ

ಕೊಡಗು : ಕೇಂದ್ರದ ಬಿಜೆಪಿ ಸರ್ಕಾರದ ಮೂರೂವರೆ ವರ್ಷದ ಅವಧಿಯಲ್ಲಿ ಇಂಧನ ತೈಲ ಬೆಲೆಯನ್ನು 14 ಬಾರಿ ಹೆಚ್ಚಳ ಮಾಡಲಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ 45 ಡಾಲರ್‍ಗೆ ಕುಸಿದ ಸಂದರ್ಭವೂ ಅದರ ಲಾಭವನ್ನು ಜನರಿಗೆ ಒದಗಿಸಲು ಕೇಂದ್ರ ಮುಂದಾಗಿಲ್ಲ. 77 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹದ ಪ್ರಮಾಣ ಪ್ರಸ್ತುತ 2.42 ಲಕ್ಷ ಕೋಟಿಗಳಷ್ಟಾಗಿದೆಯಾದರೂ ಆ ಹಣ ಎಲ್ಲಿದೆ, ಯಾವ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರದಿಂದ ಬಳಕೆಯಾಗುತ್ತಿದೆ ಎಂದು ಕೆಪಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಕೊಡಗಿನಲ್ಲಿ ಮಾತನಾಡಿದ ಅವರು  ಬಿಜೆಪಿ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿತ್ತು. ಅದರಂತೆ ಇಲ್ಲಿಯವರೆಗೆ 7 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ, ಸೃಷ್ಟಿಯಾಗಿರುವ ಉದ್ಯೋಗ ಕೇವಲ 3.50 ಲಕ್ಷವೆಂದು ಲೇವಡಿ ಮಾಡಿದರು. ಜಿಎಸ್‍ಟಿ ಜಾರಿಯಿಂದ ಸಣ್ಣ ಉದ್ಯಮಗಳು ನೆಲಕಚ್ಚಿದ್ದು, ನೋಟು ಅಮಾನ್ಯೀಕರಣದಿಂದ ಎಷ್ಟು ಪ್ರಮಾಣದ ಕಪ್ಪು ಹಣವನ್ನು ಪತ್ತೆ ಹಚ್ಚಲಾಗಿದೆ ಎನ್ನುವ ಮಾಹಿತಿಯನ್ನು ಕೇಂದ್ರ ನೀಡಿದೆಯೆ ಎಂದು ಪ್ರಶ್ನಿಸಿದರು. ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಅಧಿಕಾರದ ಅವಧಿಯಲ್ಲಿ ತಾನು ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳಲ್ಲಿ ಶೇ.95 ರಷ್ಟನ್ನು ಈಡೇರಿಸುವ ಮೂಲಕ ಉತ್ತಮ ಕಾರ್ಯ ನಿರ್ವಹಿಸಿದ್ದು, ಮತ್ತೆ ಪಕ್ಷ ಅಧಿಕಾರಕ್ಕೇರಲು ತಮ್ಮೊಳಗಿನ ವ್ಯತ್ಯಾಸ, ಭಿನ್ನಾಭಿಪ್ರಾಯಗಳನ್ನು ಬಿಟ್ಟು ಕಾರ್ಯನಿರ್ವಹಿಸುವಂತೆ ಕರೆ ನೀಡಿದರು.  ಮುಂದಿನ 2018ರ ಏಪ್ರಿಲ್‍ನಲ್ಲಿ ನಡೆಯಬಹುದಾದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಗೆದ್ದು ಬರುವ ಮೂಲಕ ಬಡವರ್ಗದ ಜನರ ಬದುಕನ್ನು ಉತ್ತಮ ಪಡಿಸುವ ನಿಟ್ಟಿನ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗಬೇಕಿದೆಯೆಂದು ತಿಳಿಸಿದರು.

 

 

 

Get Latest updates on WhatsApp. Send ‘Add Me’ to 8550851559

Loading...