ತರಾತುರಿಯಲ್ಲಿ  ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆಯನ್ನು ಜಾರಿಗೆ ತರುವ ಅಗತ್ಯವಿಲ್ಲ : ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು :  ತರಾತುರಿಯಲ್ಲಿ  ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆಯನ್ನು ಜಾರಿಗೆ ತರುವ ಅಗತ್ಯವಿಲ್ಲ. ವಿಧಾನಸಭಾ ಅಧಿವೇಶನದಲ್ಲಿ ಮಸೂದೆಯನ್ನು ತೀವ್ರವಾಗಿ ವಿರೋಧಿಸಲಾಗುವುದು ಹಾಗೂ ಇದರ ವಿರುದ್ದ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಜೆ.ಪಿ. ನಗರದ ತಮ್ಮ  ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮಸೂದೆಯನ್ನು ಜಾರಿಗೆ ತರುವ ತರಾತುರಿ ಏಕೆ ಎಂದು ಪ್ರಶ್ನಿಸಿದರಲ್ಲದೇ,  ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆಯನ್ನು ಜಾರಿಗೆ ತರಲು ಹೊರಟಿರುವ ಸರ್ಕಾರದ ನಿರ್ಧಾರ ಹುಚ್ಚುತನದಿಂದ ಕೂಡಿದೆ ಎಂದರು. ವಿಧಾನಸಭೆ ಚುನಾವಣೆ ಸದ್ಯದಲ್ಲೇ ನಡೆಯಲಿದ್ದು, ಆ ಸಂದರ್ಭದಲ್ಲಿ ಮಸೂದೆ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿ ಮುಂದಿನ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಸೂದೆ ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ನಡೆಸುತ್ತಿರುವ  ಮುಷ್ಕರಕ್ಕೆ, ಅವರ  ಒತ್ತಾಯಕ್ಕೆ ಸರ್ಕಾರ ಸ್ಪಂದಿಸಬೇಕಾಗಿದೆ ಎಂದು ತಿಳಿಸಿದರು. ಕೋಟ್ಯಂತರ ರೂ. ಸಾಲ ಮಾಡಿ ಆಸ್ಪತ್ರೆಗಳನ್ನು ಕಟ್ಟಿರುತ್ತಾರೆ. ಅದರ ನಿರ್ವಹಣೆಗೆ ತಕ್ಕಂತೆ ಬಿಲ್‌ಗಳನ್ನು ಹಾಕುತ್ತಾರೆ. ಎಲ್ಲ ಖಾಸಗಿ ವೈದ್ಯರ ಬಗ್ಗೆ ಸಾರಾಸಗಟಾಗಿ ಟೀಕೆ ಮಾಡುವುದು ಟೀಕೆ ಮಾಡುವುದು ಸರಿಯಲ್ಲ ಎಂದು ತಿಳಿಸಿದರು. ಸರ್ಕಾರ ಖಾಸಗಿ ಆಸ್ಪತ್ರೆಗಳ ಚಿಕಿತ್ಸೆಗೆ ದರ ನಿಗದಿ ಮಾಡುವುದಾದರೆ ವಕೀಲರುಗಳು ಅಧೀನ ನ್ಯಾಯಾಲಯ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಾ‌ಡಲು ತೆಗೆದುಕೊಳ್ಳುವ ಶುಲ್ಕಕ್ಕೂ ನಿರ್ಬಂಧ ಹೇರಲಿದ್ದಾರೆಯೇ ಎಂದು ಪ್ರಶ್ನಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲೇ ಉತ್ತಮ ಚಿಕಿತ್ಸೆ ದೊರೆತರೆ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ಏಕೆ ಹೋಗುತ್ತಾರೆ. ಅಂಥ ಪರಿಸ್ಥಿತಿ ನಿರ್ಮಾಣ ಮಾಡಿ. ಖಾಸಗಿ ಆಸ್ಪತ್ರೆಯಲ್ಲಿ ಸಿಗುವ ಚಿಕಿತ್ಸಾ ಸೌಲಭ್ಯವನ್ನು ಸರ್ಕಾರಿ ಆಸ್ಪತ್ರೆಗಳಲ್ಲೂ ಒದಗಿಸಿ ಎಂದು ಹೇಳಿದರು.

 

 

 

Get Latest updates on WhatsApp. Send ‘Add Me’ to 8550851559