ಟ್ಯಾಂಕರ್ ಗಳಿಂದ ಪೆಟ್ರೋಲ್ ಡೀಸಲ್ ಕದಿಯುತ್ತಿದ್ದ ಖತರ್ನಾಕ್ ಕಳ್ಳರ ಬಂಧನ – News Mirchi

ಟ್ಯಾಂಕರ್ ಗಳಿಂದ ಪೆಟ್ರೋಲ್ ಡೀಸಲ್ ಕದಿಯುತ್ತಿದ್ದ ಖತರ್ನಾಕ್ ಕಳ್ಳರ ಬಂಧನ

ಬೆಂಗಳೂರು :  ಪೆಟ್ರೋಲ್- ಡೀಸಲ್ ಗಳನ್ನು ಟ್ಯಾಂಕರ್‌ಗಳಿಂದ ಕಳವು ಮಾಡಿ ಮಾರಾಟ ಮಾಡುತ್ತಿದ್ದ ನಾಲ್ವರ ಖತರ್ನಾಕ್ ಗ್ಯಾಂಗ್‌ನ್ನು ಪತ್ತೆ ಹಚ್ಚಿರುವ ಸಿಸಿಬಿ ಪೊಲೀಸರು 40 ಲಕ್ಷ 80 ಸಾವಿರ ಮೌಲ್ಯದ ಡೀಸೆಲ್‌ನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಹಾಸನದ ಕಾಳಮಾರನಹಳ್ಳಿಯ ಗುರುರಾಜ್ (37),  ಹೊಸಕೋಟೆಯ ದೇವನಗೊಂದಿ ವೆಂಕಟನಾದಯ್ಯ (30), ಕೋರಮಂಗಲದ ಮಲ್ಲೇಶ್ (35), ಬಿ.ಎಸ್.ಕೆ 2ನೇ ಹಂತದ ಭವಾನಿ ನಗರದ ಗೋವಿಂದರಾಜು (41)ನನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಹೊಸಕೋಟೆಯ ಮಾಕನಹಳ್ಳಿಯ ಮಂಜುನಾಥನಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ತಿಳಿಸಿದ್ದಾರೆ.

ಆರೋಪಿಗಳು ಕಳೆದ 1 ವರ್ಷದಿಂದ ಗ್ಯಾಂಗ್ ಕಟ್ಟಿಕೊಂಡು ದೇವನಗೊಂದಿ, ಇನ್ನಿತರ ಕಡೆಗಳಲ್ಲಿ ರಸ್ತೆ ಪಕ್ಕ ಟ್ಯಾಂಕರ್ ನಿಲ್ಲಿಸಿ ಚಾಲಕರು ಮಲಗಿರುವ ವೇಳೆ ಡೀಸಲ್ ಹಾಗೂ ಪೆಟ್ರೋಲ್ ಕಳವು ಮಾಡುತ್ತಿದ್ದರಲ್ಲದೇ, ಕಳವು ಮಾಡಿದ ಡೀಸೆಲ್ ಹಾಗೂ ಪೆಟ್ರೋಲ್‌ನನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಮೇಡಹಳ್ಳಿಯ ಗಾಯಿತ್ರಿ ಟಿಂಬರ್‌ಯಾರ್ಡ್ ಹಿಂಭಾಗದಲ್ಲಿ ನಿಲ್ಲಿಸಿದ್ದ ಟ್ಯಾಂಕರ್‌ನಲ್ಲಿ ಪೆಟ್ರೋಲ್ ಕಳವು ಮಾಡುತ್ತಿದ್ದ ಖಚಿತ ಮಾಹಿತಿಯಾಧರಿಸಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 40 ಲಕ್ಷ 80 ಸಾವಿರ ಮೌಲ್ಯದ 60 ಸಾವಿರ ಲೀಟರ್ ಡೀಸಲ್‌ನ 3 ಟ್ಯಾಂಕರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.  ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

Get Latest updates on WhatsApp. Send ‘Add Me’ to 8550851559

Loading...