ಮಹಿಳೆಯರು ಹಾಗೂ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪ್ರಯಾಣಕ್ಕೆ ಇಂದಿರಾ ಸಾರಿಗೆ ವ್ಯವಸ್ಥೆಗೆ ಚಿಂತನೆ : ಸಚಿವ ಎಚ್.ಎಂ ರೇವಣ್ಣ – News Mirchi

ಮಹಿಳೆಯರು ಹಾಗೂ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪ್ರಯಾಣಕ್ಕೆ ಇಂದಿರಾ ಸಾರಿಗೆ ವ್ಯವಸ್ಥೆಗೆ ಚಿಂತನೆ : ಸಚಿವ ಎಚ್.ಎಂ ರೇವಣ್ಣ

ಬೆಂಗಳೂರು :  ಮಹಿಳೆಯರು ಹಾಗೂ ವಿದ್ಯಾರ್ಥಿಗಳಿಗೆ ನಗರ ಸಾರಿಗೆ ವ್ಯವಸ್ಥೆಯಲ್ಲಿ ರಿಯಾಯಿತಿ ದರದಲ್ಲಿ ಪ್ರಯಾಣಿಸಲು ಅನುಕೂಲವಾಗುವಂತೆ ಇಂದಿರಾ ಸಾರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಲು ಚಿಂತನೆ ನಡೆದಿದೆ ಎಂದು ಸಾರಿಗೆ ಸಚಿವ ಎಚ್.ಎಂ ರೇವಣ್ಣ ಹೇಳಿದರು.

ಮಹಿಳೆಯರು ಹಾಗೂ ವಿದ್ಯಾರ್ಥಿಗಳಿಗೆ ಸವಲತ್ತುಗಳನ್ನು ಒದಗಿಸುವ ನಿಟ್ಟಿನಲ್ಲಿ ದಿ. ಪ್ರಧಾನಿ ಇಂದಿರಾಗಾಂಧಿಯವರ ಜನ್ಮಶತಾಬ್ಧಿಯ ಸಂದರ್ಭದಲ್ಲಿ ರಿಯಾಯಿತಿ ದರದ ಇಂದಿರಾ ಸಾರಿಗೆ ವ್ಯವಸ್ಥೆಯನ್ನು ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆದಿವೆ ಎಂದು ತಿಳಿಸಿದರು. ಪ್ರಯಾಣದರ ಎಷ್ಟಿರಬೇಕು. ಯಾವ ಮಾರ್ಗಗಳಲ್ಲಿ ಇಂದಿರಾ ಸಾರಿಗೆಯನ್ನು ಜಾರಿ ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಸಾರಿಗೆ ವ್ಯವಸ್ಥೆಯ ರೂಪುರೇಷೆಗಳ ತಯಾರಿ ನಡೆದಿದೆ. ಸದ್ಯದಲ್ಲೇ ಈ ಹೊಸ ವ್ಯವಸ್ಥೆಯ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡುವುದಾಗಿ ಹೇಳಿದರು.

ನಗರ ಸಾರಿಗೆಯನ್ನು ಖಾಸಗಿಯವರ ಜೊತೆ ಒಪ್ಪಂದ ಮಾಡಿಕೊಂಡು ಖಾಸಗಿ ಬಸ್‌ಗಳನ್ನು ಓಡಿಸುವ ಚಿಂತನೆ ಇದ್ದು ಅಂತಿಮವಾಗಿಲ್ಲ. ನಗರ ಸಾರಿಗೆಯನ್ನು ಖಾಸಗೀಕರಣಗೊಳಿಸುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದರು. ನಗರ ಸಾರಿಗೆಗೆ ಒಪ್ಪಂದದ ಮೇಲೆ  ಖಾಸಗಿ ಬಸ್‌ಗಳನ್ನು ತೆಗೆದುಕೊಂಡರೂ ಚಾಲಕರು ಹಾಗೂ ನಿರ್ವಾಹಕರು ಬಿಎಂಟಿಸಿಗೆ ಸೇರಿದವರೇ ಆಗಿರುತ್ತಾರೆ ಎಂದು ಸ್ಪಷ್ಟಪಡಿಸಿದರು. ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುತ್ತಿದೆ. ರಾಜ್ಯ ರಸ್ತೆ ಸಾರಿಗೆ ವ್ಯವಸ್ಥೆ ಜಗತ್ತಿನಲ್ಲೇ ಅತ್ಯುತ್ತಮ ಸಾರಿಗೆ ವ್ಯವಸ್ಥೆಯಲ್ಲಿ 2ನೇ ಸ್ಥಾನದಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರಿಗೆ ಸಂಸ್ಥೆಗೆ ಹೆಚ್ಚಿನ ಆರ್ಥಿಕ ನೆರವು ನೀಡಿದ್ದಾರೆ ಎಂದು ತಿಳಿಸಿದರು. ಸಾಮಾಜಿಕ ಜಾಲತಾಣದ ಮೂಲಕ ಜನತೆ ಸಾರಿಗೆ ವ್ಯವಸ್ಥೆಯ ಬಗ್ಗೆ ವ್ಯಕ್ತಪಡಿಸುವ ದೂರುಗಳಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ, ತಾವೂ ಸಹ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವುದಾಗಿ ತಿಳಿಸಿದರು.

 

 

 

 

Get Latest updates on WhatsApp. Send ‘Add Me’ to 8550851559

Loading...