ಬೆಳಗಟ್ಟದಿಂದ ನೇರವಾಗಿ ನೀರು ಹರಿಸುವ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಸಿಎಂಗೆ ಸರ್ವಪಕ್ಷಗಳ ನಿಯೋಗದ ಮನವಿ – News Mirchi

ಬೆಳಗಟ್ಟದಿಂದ ನೇರವಾಗಿ ನೀರು ಹರಿಸುವ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಸಿಎಂಗೆ ಸರ್ವಪಕ್ಷಗಳ ನಿಯೋಗದ ಮನವಿ

ಬೆಂಗಳೂರು :  ಜಗಳೂರು ತಾಲೂಕಿನ ನೀರಾವರಿ ಯೋಜನೆಗೆ ಭದ್ರಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ತಾಲೂಕು ಬೆಳಗಟ್ಟದಿಂದ ನೇರವಾಗಿ ನೀರು ಹರಿಸುವ ಯೋಜನೆಯನ್ನು ಅನುಷ್ಠಾನಗೊಳಿಸಬೇಕೆಂದು ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಪಿ. ರಾಜೇಶ್ ನೇತೃತ್ವದ ಸರ್ವಪಕ್ಷಗಳ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದೆ.

ಜಗಳೂರು ತಾಲೂಕಿನ 18 ಸಾವಿರ ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸಲು 18 ಟಿಎಂಸಿ ನೀರು ಹರಿಸಲು ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಮುಖ್ಯಮಂತ್ರಿಗಳ ಗೃಹ ಕಛೇರಿಯ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ಮಾಡಿದ ನಿಯೋಗವು ಮನವಿ ಮಾಡಿದೆ.

ಈಗಾಗಲೇ ಪ್ರಾಥಮಿಕ ಹಂತದಲ್ಲಿ 2 ಕೋಟಿ ವೆಚ್ಚದಲ್ಲಿ  ಜಗಳೂರು ತಾಲೂಕಿನ 18 ಸಾವಿರ ಎಕರೆಗೆ ನೀರು ಹರಿಸಲು ಸರ್ವೇ ಕಾರ್ಯ ಪೂರ್ಣಗೊಳಿಸಲಾಗಿದೆ. ಜಗಳೂರು ತಾಲೂಕಿಗೆ  ಬೆಳಗಟ್ಟದಿಂದ ನೇರವಾಗಿ ನೀರು ಹರಿಸಲು ತಾಂತ್ರಿಕ ಮಟ್ಟದ ಭೌಗೋಳಿಕವಾಗಿ ಸಾಧ್ಯವಾಗುತ್ತಿಲ್ಲ. ಅದರ ಬದಲಾಗಿ ಕಾತ್ರಾಳು ಮಾರ್ಗವಾಗಿ ಜಗಳೂರು ತಾಲೂಕಿಗೆ ನೀರು ಹರಿಸಿದಲ್ಲಿ ಯೋಜನಾ ವೆಚ್ಚ 180 ಕೋಟಿ ಆಗಲಿದೆ ಎಂದು ವರದಿ ತಯಾರಿಸಲಾಗಿದೆ.

ಜಲಸಂಪನ್ಮೂಲದ ಅಧಿಕಾರಿಗಳ  ಪ್ರಕಾರ  ಬೆಳಗಟ್ಟದಿಂದ ಸಂಗೇನಹಳ್ಳಿಗೆ ನೀರು ಹರಿಸಲು ಯೋಜನಾ ವೆಚ್ಚ 3 ಸಾವಿರ ಕೋಟಿ ಆಗಲಿದೆ ಎಂಬುದನ್ನು  ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು. ಈಗಾಗಲೇ ನೀರಾವರಿ ಯೋಜನೆ ಅನುಷ್ಠಾನಕ್ಕೆ ಹೋರಾಟ ನಡೆದಿದ್ದು, ಈ ಭಾವನೆಗಳಿಗೆ ಸ್ಪಂದಿಸಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

 

 

 

Get Latest updates on WhatsApp. Send ‘Add Me’ to 8550851559

Loading...