ಸಾರಿಗೆ ವಲಯದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿಸಲು ವಿಶೇಷ ಪ್ರೋತ್ಸಾಹಧನ ನೀಡಲಾಗುವುದು : ಹೆಚ್.ಎಂ.ರೇವಣ್ಣ – News Mirchi

ಸಾರಿಗೆ ವಲಯದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿಸಲು ವಿಶೇಷ ಪ್ರೋತ್ಸಾಹಧನ ನೀಡಲಾಗುವುದು : ಹೆಚ್.ಎಂ.ರೇವಣ್ಣ

ಬೆಂಗಳೂರು :  ಇಂದಿರಾ ಗಾಂಧಿ ಜನ್ಮಶತಮಾನೋತ್ಸವ ಪ್ರಯುಕ್ತ ಮಹಿಳೆಯರು ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಗರದ ಆಯ್ದ ಪ್ರದೇಶಗಳಿಗೆ ರಿಯಾಯಿತಿ ಟಿಕೆಟ್ ದರದಲ್ಲಿ ಹೊಸತಾಗಿ ಇಂದಿರಾ ಸಾರಿಗೆ ಬಸ್ ಸೇವೆ ಆರಂಭಿಸಲಾಗುವುದು  ಎಂದು ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಸುರಕ್ಷತೆಗಾಗಿ ಈ ಸಾರಿಗೆ ವ್ಯವಸ್ಥೆ ಆರಂಭಿಸಲಾಗುತ್ತಿದೆ. ಇದಕ್ಕೆ ನಿರ್ಭಯಾ ನಿಧಿಯಿಂದ ಹಣ ಬಳಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.  ಪ್ರಸಕ್ತ ಸರ್ಕಾರಿ ಬಸ್‌ಗಳಲ್ಲಿ 16 ಆಸನಗಳನ್ನು ಮೀಸಲಿಡಲಾಗುತ್ತಿದ್ದು, ಈ ಆಸನಗಳಲ್ಲಿ ಕುಳಿತು ಪ್ರಯಾಣಿಸುವ ಗಂಡಸರಿಗೆ ದಂಡ ವಿಧಿಸಲಾಗುತ್ತಿದೆ. ನಗರದಲ್ಲಿ ಉದ್ಯೋಗಿ ಮಹಿಳೆಯರ ಸಂಖ್ಯೆ ಹೆಚ್ಚಾಗಿರುವುದರಿಂದ ಈ ಸಂಖ್ಯೆಯನ್ನು ಹೆಚ್ಚು ಮಾಡಲು ಚಿಂತನೆ ನಡೆದಿದೆ. ಮಾತ್ರವಲ್ಲ ಇಂದಿರಾ ಸಾರಿಗೆ ಬಂದ ಬಳಿಕ ಮಹಿಳೆಯರ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.

ಬಸ್‌ಗಳಲ್ಲಿ  ಮಹಿಳಾ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ 1000 ಸಿಸಿಟಿವಿ ಅಳವಡಿಸಲು ಕ್ರಮಕೈಗೊಳ್ಳಲಾಗಿದೆ. ಬಿಎಂಟಿಸಿಯಲ್ಲಿ ಶೇಕಡಾ 50 ರಷ್ಟು ಮಹಿಳೆಯರೇ ಪ್ರಯಾಣಿಸುತ್ತಿದ್ದು, ಮಹಿಳಾ ಸ್ನೇಹಿ ಬಸ್‌ಗಳನ್ನಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಸಾರಿಗೆ ಮೊದಲ ಸ್ಥಾನದಲ್ಲಿದ್ದು, ಇದುವರೆಗೆ 106 ಪ್ರಶಸ್ತಿಗಳಿಗೆ ಭಾಜನವಾಗಿದೆ ಎಂದು ಹೇಳಿದರು.

ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಪ್ರಗತಿ ಹೊಂದಬೇಕು ಎಂಬ ಉದ್ದೇಶದಿಂದ  ಸಾರಿಗೆ ವಲಯದಲ್ಲೂ ಅವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆದರೆ ಚಾಲನಾ ಹುದ್ದೆಯಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇರುವುದರಿಂದ ಮಹಿಳೆಯರಿಗೆ ವಿಶೇಷ ತರಬೇತಿ ನೀಡಿ, ಪ್ರೋತ್ಸಾಹಧನ ನೀಡಿ ಅವರನ್ನು ಈ ಹುದ್ದೆಗೆ ಆಕರ್ಷಿಸಲಾಗುತ್ತದೆ ಎಂದು ತಿಳಿಸಿದರು.

 

 

Get Latest updates on WhatsApp. Send ‘Add Me’ to 8550851559

Loading...