ಉದ್ಯೋಗದ ನೆಪದಲ್ಲಿ ಮೂವರು ಯುವತಿಯರ ಹೆಸರಿನಲ್ಲಿ ಕರೆ ಮಾಡಿ ವಂಚನೆ : 7ಲಕ್ಷ ವಂಚಿಸಿ ಯುವಕ ಪರಾರಿ

ಬೆಂಗಳೂರು  :  ನಿರುದ್ಯೋಗಿ ಯುವಕರೊಬ್ಬರಿಗೆ ಮೂವರು ಯುವತಿಯರ ಹೆಸರಿನಲ್ಲಿ ಏರ್‌ಟೆಲ್ ಕಂಪೆನಿಯಲ್ಲಿ ಟ್ರಾವೆಲ್ ಮ್ಯಾನೇಜರ್ ಕೆಲಸ ಕೊಡಿಸುವುದಾಗಿ ಕರೆ ಮಾಡಿ ನಂಬಿಸಿ ವಂಚಕನೋರ್ವ  ಏಳು ಲಕ್ಷಕ್ಕೂ ಹೆಚ್ಚಿನ ವಂಚನೆ ನಡೆಸಿ ಪರಾರಿಯಾಗಿದ್ದು, ಸಿಐಡಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.

ಪ್ರೀತಿ, ಕೀರ್ತಿ, ರಾಧಿಕಾ ಎನ್ನುವ ಯುವತಿಯರ ಹೆಸರಿನಲ್ಲಿ ಕರೆ ಮಾಡಿ  ಏರ್‌ಟೆಲ್ ಕಂಪೆನಿಯಲ್ಲಿ ಟ್ರಾವೆಲ್ ಮ್ಯಾನೇಜರ್ ಕೆಲಸಕೊಡಿಸುವುದಾಗಿ ನಂಬಿಸಿದ ವಂಚಕ ಡಾಕ್ಯುಮೆಂಟ್ ವೇರಿಫಿಕೇಶನ್ ಫೀಸ್, ಜಾಬ್ ಕನ್ಫರ್ಮೇಶನ್, ಐಡಿ ಆಕ್ಟಿವೇಶನ್,ಕನ್ಸಲ್ಟನ್ಸಿ ಸರ್ವಿಸ್ ಫೀಸ್, ಅಥಾರಿಟಿ ಸಿಗ್ನೇಚರ್,ಜಿಎಸ್‌ಟಿ ಚಾರ್ಜಸ್ ಸೇರಿ 7,19,360 ರೂ. ವಂಚನೆ ಮಾಡಿದ್ದಾನೆ. ಅ.9 ರಂದು ಮೊಬೈಲ್ ಕರೆ ಮಾಡಿಸಿ ನಾಳೆ ಸಂದರ್ಶನವಿದೆ ಎಂದು ಹಣವನ್ನು ಬ್ಯಾಂಕ್ ಖಾತೆಗೆ ಹಾಕಿಸಿಕೊಂಡು ವಂಚಿಸಿದ್ದು ಮರುದಿನ ಯಾವುದೇ ಸಂದರ್ಶನ ನಡೆಯದೇ ಆತಂಕಗೊಂಡು ಪರಶೀಲನೆ ನಡೆಸಿದ ಯುವಕನಿಗೆ ತಾವು ಹಾಕಿದ ಹಣ ಅನಿಲ್ ಕುಮಾರ್ ರಾಯ್ ಎಂಬುವರ ಹೆಸರಿನ ಅಕೌಂಟ್‌ಗೆ ಜಮಾ ಆಗಿರುವುದು ಕಂಡುಬಂದಿದೆ.

ಈ ಕುರಿತು ವಂಚನೆಗೊಳಗಾದ ಯುವಕ ಸಿಐಡಿ ಪೊಲೀಸರಿಗೆ ದೂರು ನೀಡಿ ಕರೆ ಮಾಡಿದ ಮೊಬೈಲ್‌ನಂಬರ್‌ಗಳು ಬ್ಯಾಂಕ್ ಖಾತೆಯ ವಿವರಗಳನ್ನು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಸಿಐಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Get Latest updates on WhatsApp. Send ‘Add Me’ to 8550851559