ಕುಲಗಳ ಮಧ್ಯೆ ವೈಮನಸ್ಸನ್ನು ಹುಟ್ಟು ಹಾಕುತ್ತಿರುವ ಕಲುಷಿತ ಶಕ್ತಿಗಳ ಬಗ್ಗೆ ಎಚ್ಚರವಹಿಸಬೇಕಾಗಿದೆ : ಬಿ.ಎಸ್.ಯಡಿಯೂರಪ್ಪ

ಹಾಸನ : ನಾಡು ಕಂಡ ಶ್ರೇಷ್ಠ ದಾರ್ಶನಿಕರು, ಭಕ್ತಿ ಮಾರ್ಗದಲ್ಲಿ ದೇವರನ್ನು ಒಲಿಸಿಕೊಂಡ ಶ್ರೇಷ್ಠ ಸಾಧಕರು ಕನಕದಾಸರು.”ಕುಲ ಕುಲ ಕುಲವೆಂದು ಹೊಡೆದಾಡದಿರಿ” ಎಂದು ಶತಮಾನಗಳ ಹಿಂದೆಯೇ ನಮ್ಮ ಎಚ್ಚರಿಸಿದವರು. ಆದರೆ ಇವತ್ತು, ಕನಕದಾಸರ ಹೆಸರನ್ನು ಹೇಳುತ್ತಾ, ಕುಲ ಕುಲಗಳ ಮಧ್ಯೆ, ಸಮುದಾಯಗಳ ಮಧ್ಯೆ, ವೈಮನಸ್ಸನ್ನು ಹುಟ್ಟು ಹಾಕುತ್ತಿರುವ ಕಲುಷಿತ ಶಕ್ತಿಗಳ ಬಗ್ಗೆ ಎಚ್ಚರವಹಿಸಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಅರಸಿಕೆರೆಯಲ್ಲಿ ಪರಿವರ್ತನಾ ರ್ಯಾಲಿಯಲ್ಲಿ ಭಾಗವಹಿಸಿದ ಅವರು ರಾಜ್ಯದ ಜನತೆಗೆ ಕನಕದಾಸರ ಜಯಂತಿಯ ಶುಭಾಶಯಗಳನ್ನು ತಿಳಿಸಿದರು. ಬಳಿಕ ಮಾತನಾಡಿದ ಅವರು ಕಾಂಗ್ರೆಸ್ ಅವಧಿಯ ಆಡಳಿತದಲ್ಲಿ, ರಾಜ್ಯವಾಗಲಿ, ನಿಮ್ಮ ಕ್ಷೇತ್ರವಾಗಲಿ, ಅಭಿವೃದ್ಧಿಯ ಮಾನದಂಡಗಳಲ್ಲಿ ಎಲ್ಲಿ ನಿಂತಿದೆ ಎನ್ನುವುದನ್ನು ನೀವೆಲ್ಲರೂ ಒಮ್ಮೆ ಯೋಚಿಸಿ. ಕೇಂದ್ರ ಸರ್ಕಾರ ನೀಡಿದ ಅನುದಾನಗಳ ಬಳಕೆಯ ಲೆಕ್ಕ ಕೇಳಿದರೆ ಅದೇನು ಭಿಕ್ಷೆಯಲ್ಲ, ನಮ್ಮ ಪಾಲು ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಹಿಂದೆ ಯುಪಿಎ ಸರ್ಕಾರದ ಆಡಳಿತವಿದ್ದಾಗ ಯಾಕೆ ಕರ್ನಾಟಕಕ್ಕೆ ಅಷ್ಟು ಕಡಿಮೆ ಪಾಲು ಸಿಗುತ್ತಿತ್ತು ಸಿದ್ದರಾಮಯ್ಯನವರೇ? ಆಗ ಯಾಕೆ ನೀವು ರಾಜ್ಯದ ಪಾಲಿನ ಬಗ್ಗೆ ದನಿಯೆತ್ತಲಿಲ್ಲ ಎಂದು ಪ್ರಶ್ನಿಸಿದರು.

13ನೇ ಹಣಕಾಸು ಆಯೋಗದ ಅನ್ವಯ ಯುಪಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ನೀಡಲಾಗಿದ್ದು 88,583 ಕೋಟಿ ರೂ. ಮಾತ್ರ. 14ನೇ ಹಣಕಾಸು ಆಯೋಗದನ್ವಯ, ಮೋದಿ ಸರ್ಕಾರ ನಮ್ಮ ರಾಜ್ಯಕ್ಕೆ ನೀಡುತ್ತಿರುವುದು 2 ಲಕ್ಷ 19 ಸಾವಿರದ 505 ಕೋಟಿ ರೂ. ಬರಪರಿಹಾರಕ್ಕೆ 5 ವರ್ಷಗಳಲ್ಲಿ ಯುಪಿಎ ರಾಜ್ಯಕ್ಕೆ ನೀಡಿದ್ದು 973.82ಕೋಟಿ ರೂ. ಮಾತ್ರ. ಅದೇ ನರೆಂದ್ರಮೋದಿ ಸರ್ಕಾರ 2014-17ರವರೆಗೆ, ಕೇವಲ 3 ವರ್ಷಗಳಲ್ಲಿ ಬರಪರಿಹಾರ ಕಾರ್ಯಗಳಿಗೆ ರಾಜ್ಯಕ್ಕೆ 4,068.58ಕೋಟಿ ರೂ. ನೀಡಿದೆ ಎಂದರು. ಆಗ ಯಾಕೆ ನೀವು, ರಾಜ್ಯಕ್ಕೆ ಏಕೆ ಕಡಿಮೆ ಪಾಲು ನೀಡುತ್ತಿದ್ದೀರಿ, ಎಂದು ನಿಮ್ಮ ಕಾಂಗ್ರೆಸ್ಸಿನ ಯುಪಿಎ ಸರ್ಕಾರವನ್ನು ಆಗ್ರಹಿಸಲಿಲ್ಲ . ಅನ್ನಭಾಗ್ಯದ ಯೋಜನೆ ಬಗ್ಗೆ ಕೂಡ ನೀವು ಜನರಿಂದ ಸತ್ಯವನ್ನು ಮುಚ್ಚಿಟ್ಟಿದ್ದೀರಿ. ಕೇಂದ್ರ ಸರ್ಕಾರ ಕೆ.ಜಿ ಅಕ್ಕಿಯನ್ನು 32.64 ರೂ.ಗಳಿಗೆ ಖರೀದಿಸಿ, ರಾಜ್ಯಕ್ಕೆ 3 ರೂ.ಗಳಿಗೆ ನೀಡುತ್ತಿದೆ. ಗೋಧಿಯನ್ನು ಕೆ.ಜಿಗೆ 24.09 ರೂ.ಗಳಿಗೆ ಖರೀದಿಸಿ, ನಮ್ಮ ರಾಜ್ಯದ ಬಡವರಿಗೆ ಹಂಚಲು 2 ರೂಪಾಯಿಗೆ ನೀಡುತ್ತಿದೆ. ಇದನ್ನು ಒಮ್ಮೆಯಾದರೂ ನೀವು ಜನರಿಗೆ ಹೇಳಿದ್ದೀರಾ ಎಂದು ಪ್ರಶ್ನಿಸಿದರು.

Get Latest updates on WhatsApp. Send ‘Add Me’ to 8550851559