ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ

ಮೈಸೂರು: ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ಹಿಂದಿನ ಸಮೀಕ್ಷೆಗಳಲ್ಲಿ ಜೆಡಿಎಸ್ ಗೆಲ್ಲಬಹುದಾದ ಸ್ಥಾನಗಳ ಸಂಖ್ಯೆ 60 ಇದ್ದು, ಆ ಸಂಖ್ಯೆಯನ್ನು 113 ಕ್ಕೇರಿಸುವುದು ನನ್ನ ಗುರಿ ಎಂದು ಹೇಳಿದರು.

ಪತ್ನಿ ಅನಿತಾ ಕುಮಾರಸ್ವಾಮಿಯವರೊಂದಿಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನದ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಕುಮಾರಸ್ವಾಮಿ, ಬಂಡಾಯ ಶಾಸಕರಿಂದ ನಮಗೆ ಯಾವುದೇ ನಷ್ಟವಿಲ್ಲ, ಜನ ನಮ್ಮ ಕೈ ಹಿಡಿದು ಅಧಿಕಾರಕ್ಕೆ ತರುತ್ತಾರೆ. ಕೊನೆ ಕ್ಷಣಗಳಲ್ಲಿ ಯಾರನ್ನೂ ಪಕ್ಷ ಸೇರಲು ಅವಕಾಶ ನೀಡುವುದಿಲ್ಲ, ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ ಎಂದ ಅವರು, ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಭರವಸೆ ನೀಡಿದರು.