ರಾಮ್ ರಹೀಮ್ ಗೆ 10 ವರ್ಷ ಜೈಲು ಶಿಕ್ಷೆ |News Mirchi

ರಾಮ್ ರಹೀಮ್ ಗೆ 10 ವರ್ಷ ಜೈಲು ಶಿಕ್ಷೆ

ಇಬ್ಬರು ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಗೆ ಸಿಬಿಐ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ನೀಡಿದೆ. ಆದರೆ 10 ವರ್ಷಗಳ ಶಿಕ್ಷೆ ಸಾಲದು, ಜೀವಾವಧಿ ಶಿಕ್ಷೆ ವಿಧಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರುವುದಾಗಿ 15 ವರ್ಷಗಳ ಹಿಂದೆ ಗುರ್ಮೀತ್ ಅವರಿಂದ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆಯರು ಹೇಳಿದ್ದಾರೆ.

ಗುರ್ಮೀತ್ ತಪ್ಪಿತಸ್ಥ ಎಂದು ತೀರ್ಪು ನೀಡಿದ ನಂತರ ಶುಕ್ರವಾರ ಭುಗಿಲೆದ್ದ ಹಿಂಸಾಚಾರ ಮರುಕಳಿಸಿದಂತೆ ರೋಹಟಕ್ ಜೈಲಿನಲ್ಲಿಯೇ ವಿಚಾರಣೆ ನಡೆಸಲಾಯಿತು. ನ್ಯಾಯಾಧೀಶರ ಆದೇಶದಂತೆ ಜೈಲಿನಲ್ಲಿಯೇ ವಿಶೇಷ ಕೋರ್ಟ್ ರೂಮ್ ಸಿದ್ಧಗಳಿಸಲಾಗಿತ್ತು. ಸರ್ಕಾರಿ ಹೆಲಿಕಾಪ್ಟರ್ ನಿಂದ ನ್ಯಾಯಾಧೀಶರು ರೋಹಟಕ್ ಜೈಲು ತಲುಪಿದರು. ಎರಡೂ ಕಡೆಯ ವಕೀಲರಿಗೆ ವಾದಿಸಲು ತಲಾ 10 ನಿಮಿಷಗಳ ಕಾಲಾವಕಾಶವನ್ನು ನೀಡಿದ ನ್ಯಾಯಾಧೀಶರಾದ ಜಗದೀಪ್ ಸಿಂಗ್, ನಂತರ ಶಿಕ್ಷೆಯ ಪ್ರಮಾಣ ಘೋಷಿಸಿದರು.

  • No items.

[ಇದನ್ನೂ ಓದಿ: ಶಾಕಿಂಗ್ ಸತ್ಯ: ರಾಮ್ ರಹೀಮ್ ಅತ್ಯಾಚಾರಕ್ಕೆ ಪಿತಾಜಿ ಮಾಫಿ ಕೋಡ್ ವರ್ಡ್!]

ವಿಚಾರಣೆ ವೇಳೆ 50 ವರ್ಷದ ಗುರ್ಮೀತ್ ಮಾಡಿರುವ ಸಮಾಜಮುಖಿ ಕೆಲಸಗಳನ್ನು ಗಮನದಲ್ಲಿಟ್ಟುಕೊಂಡಿ ಕಡಿಮೆ ಶಿಕ್ಷೆ ವಿಧಿಸುವಂತೆ ಆತನ ಪರ ವಕೀಲರು ಮನವಿ ಮಾಡಿದ್ದರು. ಆದರೆ 10 ವರ್ಷಗಳಿಗಿಂತ ಕಡಿಮೆ ಶಿಕ್ಷೆಯಾಗಬಾರದು ಎಂದು ಸಿಬಿಐ ವಾದಿಸಿತ್ತು. ಡೇರಾ ಸಚ್ಚಾ ಸೌದಾ ಮುಖ್ಯ ಕಛೇರಿಯಿರುವ ಸಿರ್ಸಾ ಮತ್ತು ಗುರ್ಮೀತ್ ತಪ್ಪಿತಸ್ಥ ಎಂದು ಪ್ರಕಟಿಸಿದ ನಂತ ಹಿಂಸಾಚಾರ ಭುಗಿಲೆದ್ದಿದ್ದ ಪಂಚಕುಲದಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿತ್ತು. ಸಾವಿರಾರು ಅರೆ ಸೇನಾಪಡೆಗಳು ಮತ್ತು ಪೊಲೀಸರು ರೋಹಟಕ್ ಜೈಲು ಸುತ್ತಮುತ್ತಲಿನ ರಸ್ತೆಗಳನ್ನು ನಿರ್ಬಂಧಿಸಿ ಬಿಗಿ ಭದ್ರತೆ ಕೈಗೊಂಡಿದ್ದರು.

ಶಿಕ್ಷೆ ಪ್ರಕಟವಾದ ನಂತರ ಗುರ್ಮೀತ್ ರಾಮ್ ರಹೀಮ್ ಸಿಂಗ್ ಗೆ ಜೈಲಿನಲ್ಲಿಯೇ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ನಿಯಮಗಳ ಪ್ರಕಾರ ಆತನಿಗೆ ಸೆಲ್ ಮೀಸಲಿರಿಸಿ, ಶಿಕ್ಷೆ ಅನುಭವಿಸುತ್ತಿರುವ ಖೈದಿಗಳಿಗೆ ನೀಡುವ ಬಿಳಿ ಉಡುಪು ನೀಡಿದರು. ಇಷ್ಟು ದಿನ ಬಣ್ಣ ಬಣ್ಣದ ಉಡುಪುಗಳಲ್ಲಿ ಮಿಂಚುತ್ತಿದ್ದ ಬಾಬಾಗೆ ಇನ್ನು 10 ವರ್ಷಗಳ ಕಾಲ ಬಿಳಿ ಬಟ್ಟೆಯೇ ಗತಿ.

ಇನ್ನು ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ಗುರ್ಮೀತ್ ಪರ ವಕೀಲರು, 10 ವರ್ಷಗಳ ಶಿಕ್ಷೆಯನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸುವ ಸೂಚನೆ ನೀಡಿದ್ದಾರೆ. ಕೋರ್ಟ್ ತೀರ್ಪಿನ ಪ್ರತಿಯನ್ನು ಸಂಪೂರ್ಣ ಓದಿದ ನಂತರ ತೀರ್ಮಾನವನ್ನು ಪ್ರಕಟಿಸುವುದಾಗಿ ಮಾಧ್ಯಮಗಳಿಗೆ ಹೇಳಿದ್ದಾರೆ. 2002 ರ ಅತ್ಯಾಚಾರ ಪ್ರಕರಣವನ್ನು ಸಿಬಿಐ ಸರಿಯಾಗಿ ತನಿಖೆ ನಡೆಸಿಲ್ಲ, ಸೂಕ್ತ ಸಾಕ್ಷ್ಯಾಧಾರಗಳನ್ನೂ ಸಲ್ಲಿಸಿಲ್ಲ ಎಂದು ಗುರ್ಮೀತ್ ಪರ ವಕೀಲರು ಆರೋಪಿಸಿದ್ದಾರೆ.

Loading...
loading...
error: Content is protected !!