ಭಾರತೀಯ ಹಡಗನ್ನು ರಕ್ಷಿಸಿದ ಸೋಮಾಲಿಯಾ ಸೇನೆ

ಸೋಮಾಲಿಯಾ ಕಡಲ್ಗಳ್ಳರು ಕಳೆದ ವಾರ ಹೈಜಾಕ್ ಮಾಡಿದ ಭಾರತದ ಹಡಗನ್ನು ಸೋಮಾಲಿಯಾ ಸೇನೆ ರಕ್ಷಿಸಿದೆ. ಹಡಗಿನಲ್ಲಿದ್ದ ಇಬ್ಬರು ಭಾರತೀಯರನ್ನೂ ರಕ್ಷಿಸಿದೆ. ಆದರೆ ಇನ್ನೂ 9 ಭಾರತೀಯರು ಕಡಲ್ಗಳ್ಳರ ಸೆರೆಯಲ್ಲಿಯೇ ಇದ್ದಾರೆ ಎಂದು ಹೋಬ್ಯೋ ನಗರ ಮೇಯರ್ ಅಬ್ದುಲ್ಲಾಹೀ ಅಹ್ಮದ್ ಸೋಮವಾರ ಹೇಳಿದ್ದಾರೆ. ಐದು ವರ್ಷಗಳಿಂದ ಇಲ್ಲಿನ ತೀರ ಪ್ರದೇಶದ ಗಸ್ತು ಕುರಿತು ವಿಶ್ವದ ದೇಶಗಳು ಗಮನ ಹರಿಸಿದ್ದರಿಂದ ಇಲ್ಲಿ ಸ್ವಲ್ಪ ಮಟ್ಟಿಗೆ ದರೋಡೆಗಳು ಕಡಿಮೆಯಾಗಿದ್ದವು. ಸೋಮಾಲಿಯಾ ಸರ್ಕಾರ ಅಸ್ಥಿರತೆಯ ಕಾರಣ ಇತ್ತೀಚೆಗೆ ಮತ್ತೆ ದಾಳಿಗಳು ಹೆಚ್ಚುತ್ತಿವೆ.

ಸೋಮಾಲಿಯಾ ರಾಜಧಾನಿ ಮೊಗದಿಷು ಹೊರವಲಯದಲ್ಲಿ ಸೇನಾ ಸಮವಸ್ತ್ರ ಧರಿಸಿದ ಉಗ್ರನೊಬ್ಬ ಒಂದು ಸೇನಾ ಶಿಬಿರದ ಮೇಲೆ ಆತ್ಮಾಹುತಿ ದಾಳಿ ಯತ್ನ ನಡೆಸಿದ್ದಾನೆ. ಸೋಮವಾರ ನಡೆದ ಈ ಘಟನೆಯಲ್ಲಿ ಒಂಬತ್ತು ಸೈನಿಕರು ಸಾವನ್ನಪ್ಪಿದ್ದಾರೆ. ಇನ್ನೂ 12 ಜನ ಗಂಭೀರ ಗಾಯಗೊಂಡಿದ್ದಾರೆ. ದಾಳಿ ನಡೆಸಿದ್ದು ತಾವೇ ಎಂದು ಅಲ್ ಖೈದಾ ಸಹೋದರ ಸಂಘಟನೆ ಅಲ್ ಷಹಾಬ್ ಹೇಳಿದೆ. ಮತ್ತೊಂದು ಘಟನೆಯಲ್ಲಿ ಬಾಂಬ್ ಸ್ಪೋಟದಿಂದ ಸರ್ಕಾರಿ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ. ಭಾನುವಾರ ಮೊಗದಿಷು ಸೇನಾ ಶಿಬಿರದ ಹೊರಗೆ ಕಾರು ಸ್ಪೋಟ ನಡೆದಿದ್ದು 15 ಜನ ಸಾವನ್ನಪ್ಪಿದ್ದಾರೆ.