ತನ್ನದೇ ಸೈನಿಕನನ್ನು ಗುಂಡು ಹಾರಿಸಿ ಕೊಲ್ಲಲು ಯತ್ನಿಸಿದ ಉತ್ತರ ಕೊರಿಯಾ ಸೇನೆ

ಉತ್ತರ ಕೊರಿಯಾದ ಕ್ರೂರ ಆಡಳಿತದ ಬಗ್ಗೆ ನಮಗೆ ತಿಳಿದದ್ದೇ. ಇದು ಯಾವ ಮಟ್ಟಕ್ಕೆ ತಲುಪಿದೆಯೆಂದರೆ ತನ್ನದೇ ಸೇನೆಯ ಸೈನಿಕನೊಬ್ಬನನ್ನು ಕೊಲ್ಲುವ ಹಂತಕ್ಕೆ. ತನ್ನ ಸೈನಿಕ ಉತ್ತರ ಕೊರಿಯಾ ಗಡಿ ದಾಟಿ ದಕ್ಷಿಣ ಕೊರಿಯಾ ಪ್ರವೇಶಿಸಲು ಯತ್ನಿಸಿದನೆಂದು ಆತನ ಸಹ ಸೈನಿಕರೇ ಆತನ ಮೇಲೆ ಗುಂಡಿನ ಮಳೆಗೆರೆದು ಕೊಲ್ಲಲು ಯತ್ನಿಸಿದ್ದಾರೆ.

ಸೋಮವಾರ ಉತ್ತರ ಕೊರಿಯಾ ಗಡಿಯಲ್ಲಿನ ಪನ್ ಮುಮುನ್ಜಾಮ್ ಗ್ರಾಮದ ಬಳಿ ಸೈನಿಕನೊಬ್ಬ ತನ್ನ ವಾಹನದಲ್ಲಿ ದಕ್ಷಿಣ ಕೊರಿಯಾ ಕಡೆ ಹೊರಟಿದ್ದ. ಇದನ್ನು ಗಮನಿಸಿದ ಉತ್ತರ ಕೊರಿಯಾ ಸೈನಿಕರು ಕೂಡಲೇ ಆತನ ಮೇಲೆ ಗುಂಡು ಹಾರಿಸಿದರು. ಹೀಗೆ 40 ಸುತ್ತು ಗುಂಡು ಹಾರಿಸಿದರು.

ಪನ್ ಮುನ್ಜಾಮ್ ಗಡಿ ಪ್ರದೇಶದಲ್ಲಿ ಯುನೈಟೆಡ್ ನೇಷನ್ಸ್ ಕಮ್ಯಾಂಡ್(ಯುಎನ್ಸಿ) ಸಿಬ್ಬಂದಿಯು ಗುಂಡಿನ ದಾಳಿಗೆ ಗುರಿಯಾಗಿದ್ದ ಸೈನಿಕನನ್ನು ಗುರುತಿಸಿ ಹೆಲಿಕ್ಯಾಪ್ಟರ್ ಮೂಲಕ ಆಸ್ಪತ್ರೆಗೆ ದಾಖಲಿಸಿದರು. ಆತನ ದೇಹದಲ್ಲಿ ಆರು ಬುಲೆಟ್ ಹೊಕ್ಕಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ, ಆತನ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಗಂಡಿನ ದಾಳಿ ನಡೆಸಿದ ಪ್ರದೇಶದಲ್ಲಿ ಪ್ರವಾಸಿಗಳು ಹೆಚ್ಚಾಗಿರುತ್ತಾರೆ. ಆದರೆ ಅದೃಷ್ಟವಶಾತ್, ಆ ಸಂದರ್ಭದಲ್ಲಿ ಎಲ್ಲಿ ಯಾರೂ ಇಲ್ಲದ ಕಾರಣ ಹೆಚ್ಚಿನ ಸಾವು ನೋವು ಸಂಭವಿಸುವುದು ತಪ್ಪಿದಂತಾಗಿದೆ. ಈ ಕುರಿತು ದಕ್ಷಿಣ ಕೊರಿಯಾ ಪ್ರತಿಕ್ರಿಯಿಸಿದ್ದು, ಉತ್ತರ ಕೊರಿಯಾ ನಡೆಸಿದ ಗುಂಡಿನ ದಾಳಿಯಲ್ಲಿ, ದಕ್ಷಿಣ ಕೊರಿಯಾ ಹಾಗೂ ಯು.ಎಸ್ ನ ಯಾವ ಸೈನಿಕರೂ ಗಾಯಗೊಂಡಿಲ್ಲ ಎಂದು ಪ್ರಕಟಣೆ ನೀಡಿದೆ.

Get Latest updates on WhatsApp. Send ‘Add Me’ to 8550851559