ಉತ್ತರ ಪ್ರದೇಶದಲ್ಲಿ ರೈಲು ದುರಂತ

***

ಕಾನ್ಪುರ: ಉತ್ತರಪ್ರದೇಶ ದಲ್ಲಿನ ಕಾನ್ಪುರ ಸಮೀಪ ಬುಧವಾರ ಬೆಳಗ್ಗೆ ರೈಲು ದುರಂತ ಸಂಭವಿಸಿದೆ. ಕಾನ್ಪುರಕ್ಕೆ 50 ಕಿ.ಮೀ ದೂರದಲ್ಲಿ ರುರಾ-ಮೆಥಾ ಮಾರ್ಗದ ನಡುವೆ ಸೆಲ್ದಾ-ಅಜ್ಮೀರ್ ಎಕ್ಸ್ ಪ್ರೆಸ್ ರೈಲಿನ 14 ಬೋಗಿಗಳು ಹಳಿ ತಪ್ಪಿದ ಕಾರಣ ಈ ಘಟನೆ ನಡೆದಿದೆ. ಈ ಘಟನೆಯಲ್ಲಿ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದು, ಟ್ರೈನ್ ಗಾರ್ಡ್ ಸೇರಿದಂತೆ ಸುಮಾರು 26 ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ. ಒಮ್ಮೆಲೇ ಬೋಗಿಗಳು ಹಳಿ ತಪ್ಪಿದ್ದರಿಂದ ಪ್ರಯಾಣಿಕರಿಗೆ ಏನು ನಡೆಯುತ್ತಿದೆ ಎಂಬುದೇ ಅರ್ಥವಾಗಲಿಲ್ಲ. ಏನೋ ಅನಾಹುತವಾಗುತ್ತಿದೆ ಎಂದು ಪ್ರಯಾಣಿಕರು ಆತಂಕಕ್ಕೊಳಗಾದರು.

ಸೆಲ್ದಾ-ಅಜ್ಮೀರ್ ಎಕ್ಸ್ ಪ್ರೆಸ್ ರೈಲು 12988 ದುರಂತಕ್ಕೀಡಾದ ವಿಷಯ ತಿಳಿಯುತ್ತಿದ್ದಂತೆ ರಕ್ಷಣಾ ತಂಡಗಳು ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಗಳಲ್ಲಿ ಮಗ್ನವಾಗಿದೆ. ಗಾಯಗೊಂಡವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ.

ಈ ಘಟನೆಯಿಂದ ಈ ಮಾರ್ಗದಲ್ಲಿ ಹಲವು ರೈಲುಗಳ ಸಂಚಾರಕ್ಕೆ ತೊಂದರೆಯುಂಟಾಗಿದೆ. ಘಟನೆ ಕುರಿತು ರೈಲ್ವೇ ಸಚಿವ ಸುರೇಶ್ ಪ್ರಭು ತನಿಖೆಗೆ ಆದೇಶಿಸಿದ್ದಾರೆ. ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡಬೇಕೆಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಗಾಯಗೊಂಡವರಿಗೆ ಪರಿಹಾರ ನೀಡುವುದಾಗಿ ಇದೇ ವೇಳೆ ಸುರೇಶ್ ಪ್ರಭು ಪ್ರಕಟಿಸಿದರು.

ರೈಲ್ವೇ ಪ್ರಕಟಿಸಿದ ಸಹಾಯವಾಣಿಗಳು ಇಂತಿವೆ:

ಕಾನ್ಪುರ: 0512 – 2323015, 2323016, 2323018
ಅಲಹಾಬಾದ್: 0532-2408149, 2408128, 2407353