ಪರೀಕ್ಷೆಗೆ ಹೆದರಿ ಶಾಲೆಯ ನೀರಿನ ಟ್ಯಾಂಕಿನಲ್ಲಿ ವಿಷ ಬೆರೆಸಲು ಯೋಚಿಸಿದ್ದನಂತೆ

ರ್ಯಾನ್ ಇಂಟರ್ ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿ ಹತ್ಯೆ ಪ್ರಕರಣದಲ್ಲಿ ದಿನಕ್ಕೊಂದು ವಿಷಯ ಹೊರಬೀಳುತ್ತಿದೆ. ಪರೀಕ್ಷೆ ಮತ್ತು ಪೋಷಕರ ಭೇಟಿ ಮುಂದೂಡಲೆಂದೇ ಪ್ರದ್ಯುಮ್ನ ನನ್ನು ಹತ್ಯೆ ಮಾಡಿದೆ, ಮೊದಲು ಶಾಲೆಯ ನೀರಿನ್ ಟ್ಯಾಂಕ್ ನಲ್ಲಿ ವಿಷ ಬೆರೆಸಲು ಯೋಚಿಸಿದ್ದೆ ಎಂದು ಸಿಬಿಐ ವಿಚಾರಣೆಯಲ್ಲಿ ಆರೋಪಿ ವಿದ್ಯಾರ್ಥಿ ಹೇಳಿದ್ದಾನೆ. ನಮ್ಮ ಮನೆಯ ವಾತಾವರಣ ಸರಿಯಿಲ್ಲ, ಅಪ್ಪ ಅಮ್ಮ ಸದಾ ಹೊಡೆದಾಡುತ್ತಿರುತ್ತಾರೆ. ಇದರಿಂದಾಗಿ ನಾನು ಓದಿನ ಬಗ್ಗೆ ಆಸಕ್ತಿ ಕಳೆದುಕೊಂಡೆ, ಈ ಪರಿಸ್ಥಿತಿಗಳೇ ಈ ಕೊಲೆಗೆ ಮುಂದಾಗುವಂತೆ ಪ್ರಚೋದಿಸಿದವು ಎಂದು ಬಂಧಿತ ವಿದ್ಯಾರ್ಥಿ ಹೇಳಿದ್ದಾನೆ.

ಸಿಬಿಐ ವಿಚಾರಣೆಯಲ್ಲಿ ಆತ ತಿಳಿಸಿದಂತೆ, ಸೆಪ್ಟೆಂಬರ್ 7 ರಂದು ಸೋಹ್ನಾ ಮಾರುಕಟ್ಟೆಯಲ್ಲಿ ಒಂದು ಚೂರಿ ಖರೀದಿಸಿದ್ದ. ಶಾಲೆಯ ವಾಟರ್ ಟ್ಯಾಂಕ್ ನಲ್ಲಿ ವಿಷವನ್ನೂ ಬೆರೆಸಲು ಯೋಚಿಸಿದ್ದ. ಆದರೆ ಕೊನೆಗೆ ಸೆಪ್ಟೆಂಬರ್ 8 ರಂದು ಚೂರಿಯಿಂದ ಶಾಲೆಗೆ ಬಂದ. ಶಾಲೆಯ ಕಾರಿಡಾರ್ ನಲ್ಲಿ ಬಾಲಕ ಪ್ರದ್ಯುಮ್ನ ಕಾಣಿಸಿದ. ಆಗಾಗ ಪಿಯಾನೋ ತರಗತಿಗೆ ಕರೆದುಕೊಂಡು ಹೋಗುತ್ತಿದ್ದರಿಂದ ಪ್ರದ್ಯುಮ್ನನ ಪರಿಚಯ ಆರೋಪಿಗೆ ಇತ್ತು. ಆತ ತನ್ನ ಕಣ್ಣಿಗೆ ಬಿದ್ದಾಗ ಟಾಯ್ಲೆಟ್ ಗೆ ಬರುವಂತೆ ಆರೋಪಿ ಪ್ರದ್ಯುಮ್ನಗೆ ಹೇಳಿದ್ದಾನೆ. ಟಾಯ್ಲೆಟ್ ಗೆ ಹೋದ ನಂತರ ಸಮಯ ನೋಡಿ ಪ್ರದ್ಯುಮ್ನ ಕತ್ತನ್ನು ಚೂರಿಯಿಂದ ಸೀಳಿದ್ದಾನೆ. ಮೊದಲ ಬಾರಿ ಇರಿದಾಗ ರಕ್ತ ಕಾರಿದ ಪ್ರದ್ಯುಮ್ನ, ಎರಡನೇ ಇರಿತಕ್ಕೆ ಸಾವನ್ನಪ್ಪಿದ.

ಪ್ರದ್ಯುಮ್ನ ಹಾಕಿಕೊಂಡಿದ್ದ ಸ್ಕೂಲ್ ಬ್ಯಾಗ್ ಅಡ್ಡವಿದ್ದುದರಿಂದ ಕೊಲೆಗಾರನಿಗೆ ರಕ್ತದ ಕಲೆ ಅಂಟಿಕೊಂಡಿರಲಿಲ್ಲ. ಆ ನಂತರ ಆರೋಪಿ ಚೂರಿಯನ್ನು ಟಾಯ್ಲೆಟ್ ನಲ್ಲಿ ಬಿಸಾಡಿ, ಶಿಕ್ಷಕರ ಬಳಿ ತೆರಳಿದ್ದಾನೆ. ನಂತರ ಏನೂ ತಿಳಿಯದವನಂತೆ ಪ್ರದ್ಯುಮ್ನನನ್ನು ಯಾರೋ ಕೊಂದಿದ್ದಾರೆ ಎಂದು ಹೇಳಿದ್ದಾನೆ. ಅಷ್ಟೇ ಅಲ್ಲದೆ ಚೂರಿಯ ಮೇಲೆ ಬೆರಳಚ್ಚುಗಳನ್ನು ಹೇಗೆ ಅಳಿಸಬಹುದೆಂಬುದನ್ನು ಇಂಟರ್ನೆಟ್ ನಲ್ಲಿ ಹುಡುಕಿದ್ದಾಗಿ ತಿಳಿದುಬಂದಿದೆ. ಇನ್ನು ಪ್ರಕರಣದಲ್ಲಿ ಸಾಕ್ಷ್ಯಾಧಾರಗಳನ್ನು ನಾಶಪಡಿಸಿ, ಸ್ಕೂಲ್ ಬಸ್ ಕಂಡಕ್ಟರ್ ಅಶೋಕ್ ಮೇಲೆ ಆರೋಪ ಮಾಡಿದ ಹರಿಯಾಣ ಪೊಲೀಸರ ನಡೆ ಮೇಲೆ ಸಿಬಿಐ ಗಮನ ಹರಿಸಿದೆ.

Get Latest updates on WhatsApp. Send ‘Add Me’ to 8550851559