ರಸ್ತೆಗಿಳಿದ ಯುದ್ಧ ವಿಮಾನಗಳು – News Mirchi

ರಸ್ತೆಗಿಳಿದ ಯುದ್ಧ ವಿಮಾನಗಳು

ಭಾರತೀಯ ವಾಯುಪಡೆಗೆ ಸೇರಿದ 16 ಯುದ್ಧ ವಿಮಾನಗಳು ಮಂಗಳವಾರ ಬೆಳಗ್ಗೆ ಲಖನೌ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಲ್ಯಾಂಡ್ ಆದವು. ಉತ್ತರ ಪ್ರದೇಶದ ಲಖನೌ ನಿಂದ 65 ಕಿ.ಮೀ ದೂರದ ಉನ್ನಾಮ್ ಜಿಲ್ಲೆಯ ಬಂಗಾರ್ಮೌ ಬಳಿ ವಾಯುಸೇನೆ ವಿಮಾನಗಳನ್ನು ಲ್ಯಾಂಡಿಂಗ್ ಮಾಡುವ ತಾಲೀಮು ನಡೆಸಿತು. ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು.

ತಾಲೀಮಿನಲ್ಲಿ ಪಾಲ್ಗೊಂಡ ಯುದ್ಧ ವಿಮಾನಗಳಲ್ಲಿ 35 ಟನ್ ತೂಕದ ಸಿ-130 ಸೂಪರ್ ಹರ್ಕ್ಯುಲಸ್ ವಿಮಾನವೂ ಇತ್ತು. ಗರುಡ ಕಮಾಂಡೋಗಳನ್ನು ಬಿಕ್ಕಟ್ಟಿನ ಪ್ರದೇಶಗಳಿಗೆ ಕಳುಹಿಸುವ ಕಸರತ್ತಿನ ಭಾಗವಾಗಿ ಈ ಬೃಹತ್ ವಿಮಾನ ಲ್ಯಾಂಡ್ ಆಯಿತು. ಇದರ ಜೊತೆಗೆ 15 ಫೈಟರ್ ಜೆಟ್ ಗಳು ಕೂಡಾ ಇಲ್ಲಿ ರಸ್ತೆಗಿಳಿದವು.

ಕೆಲವೇ ನಿಮಿಷಗಳ ಅಂತರದಲ್ಲಿ ಲ್ಯಾಂಡ್ ಆದ ವಿಮಾನಗಳು ಪುನಃ ಆಗಸಕ್ಕೆ ಹಾರಿದವು. ತುರ್ತು ಸಂದರ್ಭಗಳಲ್ಲಿ ವಿಮಾನ ನಿಲ್ಧಾಣಗಳ ಮೇಲಷ್ಟೇ ಅವಲಂಬಿಸದೆ ಹೆದ್ದಾರಿಗಳಲ್ಲಿ ಇಳಿಸುವ ಮತ್ತು ಅಲ್ಲಿಂದ ಹಾರಿಸುವ ಉದ್ದೇಶದಿಂದ ಈ ತಾಲೀಮು ನಡೆಸಲಾಯಿತು. ಈ ದೃಶ್ಯಗಳನ್ನು ನೋಡಲು ಸಾವಿರಾರು ಜನರು ಸೇರಿದ್ದರು.

900 ಕೋಟಿ ರೂಪಾಯಿ ಮೌಲ್ಯದ ಪ್ರತಿ ಸಿ-130 ಸೂಪರ್ ಹರ್ಕ್ಯುಲಸ್ ವಿಮಾನದಲ್ಲಿ 200 ಗರುಡ್ ಕಮಾಂಡೋಗಳು ಪ್ರಯಾಣಿಸಬಹುದು. 2010 ರಲ್ಲಿ ಸರ್ಕಾರ ಇವುಗಳನ್ನು ಖರೀದಿಸಿತ್ತು. 2015 ರಲ್ಲಿ ಇಂತದ್ದೇ ತಾಲೀಮು ನಡೆಸಿದಾಗ ಮಿರಾಜ್ 2000 ಯಮುನಾ ಎಕ್ಸ್ ಪ್ರೆಸ್ ಹೈವೇ ಮೇಲೆ ಲ್ಯಾಂಡ್ ಆಗಿತ್ತು.

ನಂತರ ಸುಖೋಯ್-30 ವಿಮಾನಗಳೂ ಕೂಡಾ ಲ್ಯಾಂಡಿಂಗ್ ಆಗಿದ್ದವು. ಕಳೆದ ವರ್ಷವೂ ಸುಖೋಯ್-30 ಯುದ್ಧ ವಿಮಾನ ಲಖನೌ-ಆಗ್ರಾ ಹೈವೇ ಮೇಲೆ ಇಳಿದಿತ್ತು. ಇಂಡಿಯನ್ ಏರ್ ಫೋರ್ಸ್ ನಲ್ಲಿ ಈ ಯುದ್ಧ ವಿಮಾನಗಳು ಅತ್ಯಂತ ಪ್ರಮುಖವಾದವು. ದೇಶಾದ್ಯಂತ ಸುಮಾರು 12 ರಾಷ್ಟ್ರೀಯ ಹೆದ್ದಾರಿಗಳನ್ನು ಯುದ್ಧ ವಿಮಾನಗಳ ಲ್ಯಾಂಡಿಂಗ್ ಗೆ ಸಹಕಾರಿಯಾಗುವಂತೆ ಅಭಿವೃದ್ಧಿಗೊಳಿಸಲಾಗುತ್ತಿದೆ.

Get Latest updates on WhatsApp. Send ‘Add Me’ to 8550851559

Click for More Interesting News

Loading...
error: Content is protected !!