ಗರ್ಭಿಣಿಯಾದ 18 ವರ್ಷದ ಬಾಲಕಿ, 12 ವರ್ಷದ ಬಾಲಕನೇ ಕಾರಣ!

ಕೇರಳದ ಎರ್ನಾಕುಲಂ ಜಿಲ್ಲೆಯ ಕೊಚ್ಚಿ ನಗರದಲ್ಲಿ 18 ವರ್ಷದ ಹುಡುಗಿ ಗರ್ಭವತಿಯಾದ ವಿಷಯ ಸಂಚಲನ ಸೃಷ್ಟಿಸಿದೆ. ಇದರಲ್ಲೇನು ವಿಶೇಷ ಅಂತೀರಾ? ಆ ಹುಡುಗಿ ಗರ್ಭಿಣಿಯಾಗಲು ಕಾರಣ ಎಂಬ ಆರೋಪದ ಮೇಲೆ 12 ವರ್ಷದ ಬಾಲಕ ಮತ್ತು ಹೆರಿಗೆ ಮಾಡಿಸಿದ ಆಸ್ಪತ್ರೆಯ ವಿರುದ್ಧ ಕೇಸು ದಾಖಲಾಗಿದೆ.

ಹೆರಿಗೆ ನೋವಿನಿಂದ ಬಂದ ಹುಡುಗಿಯೊಬ್ಬಳು ಖಾಸಗಿ ಅಸ್ಪತ್ರೆಗೆ ದಾಖಲಾಗಿದ್ದಳು. ನೋಡಲು ಅಪ್ರಾಪ್ತಳಂತೆ ಇದ್ದ ಕಾರಣ ಆ ಹುಡುಗಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕೇ ಬೇಡವೇ ಎಂಬ ಗೊಂದಲ ಆಸ್ಪತ್ರೆಯವರಿಗೆ. ಹೀಗಾಗಿ ಚೈಲ್ಡ್ ಲೈನ್ ಕೇಂದ್ರದ ಪ್ರತಿನಿಧಿಗಳಿಗೆ ಆಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡಿದರು. ಚೈಲ್ಡ್ ಲೈನ್ ಪ್ರತಿನಿಧಿಗಳು ಬಂದ ನಂತರ ಆ ಬಾಲಕಿಗೆ ಶಸ್ತ್ರಚಿಕಿತ್ಸೆ ನಡೆಸಿ ಮಗುವನ್ನು ಹೊರತೆಗೆದರು. ತಾಯಿ ಮಗು ಆರೋಗ್ಯದಿಂದ ಇದ್ದ ಕಾರಣ ಅವರನ್ನು ನವೆಂಬರ್ 4 ರಂದು ಡಿಸ್ಚಾರ್ಜ್ ಮಾಡಲಾಗಿತ್ತು. ಚೈಲ್ಡ್ ಲೈನ್ ಪ್ರತಿನಿಧಿಗಳು ಮತ್ತು ಅಸ್ಪತ್ರೆ ಮೂಲಗಳ ಪ್ರಕಾರ ಅ ಬಾಲಕಿ ಗರ್ಭ ಧರಿಸಲು 12 ವರ್ಷಗಳ ಬಾಲಕ ಕಾರಣ ಎನ್ನಲಾಗಿದೆ.

ಈ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಬಾಲಾಪರಾಧ ಕಾಯ್ದೆಯ ಪ್ರಕಾರ 12 ವರ್ಷದ ಬಾಲಕನನ್ನು ಆರೋಪಿಯನ್ನಾಗಿ ಮಾಡಿ ವಶಕ್ಕೆ ಪಡೆದಿದ್ದಾರೆ. ಇಷ್ಟು ಸೂಕ್ಷ್ಮ ವಿಷಯವನ್ನು ಪೊಲೀಸರಿಗೆ ಮಾಹಿತಿ ನೀಡದೆ, ರಹಸ್ಯವಾಗಿ ಆಪರೇಷನ್ ಮಾಡಿದ್ದಕ್ಕಾಗಿ ಅಸ್ಪತ್ರೆ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾತ್ರ ಪೊಲೀಸರ ವರ್ತನೆಯನ್ನು ಖಂಡಿಸುತ್ತಿದ್ದಾರೆ. ಬಾಲಕಿ ಎರಡು ತಿಂಗಳ ಹಿಂದೆಯಷ್ಟೇ ಮೇಜರ್ ಆಗಿದ್ದಾಳೆ, ಹಾಗಾಗಿ ಹೆರಿಗೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡುವ ಅಗತ್ಯವಿಲ್ಲ ಎಂದು ವಾದಿಸುತ್ತಿದ್ದಾರೆ. ಮತ್ತೆ ಕೆಲವರು 12 ವರ್ಷಗಳ ಬಾಲಕ ಇಂತಹ ಕೆಲಸ ಮಾಡಲು ಸಾಧ್ಯವೇ ಎಂದು ಪ್ರಶ್ನಿಸುತ್ತಿದ್ದಾರೆ.