ಕಸದ ತೊಟ್ಟಿಗೆ ಬಿತ್ತು 1.60 ಕೋಟಿ ರೂಪಾಯಿ!

ಕೋಲ್ಕತ:  ಸರ್ಕಾರ ನೋಟು ರದ್ದು ಮಾಡಿದ್ದರಿಂದ ಕಪ್ಪು ಕುಬೇರರಿಗೆ ಏನು ಮಾಡಲು ದಿಕ್ಕು ತೋಚದಂತಾಗಿದ್ದಾರೆ. ಹಣವನ್ನು ಬದಲಾಯಿಸಲು ದಾರಿಯಿಲ್ಲದೆ ಅದನ್ನು ಕೈಬಿಡುತ್ತಿದ್ದಾರೆ. ಭಾನುವಾರ ಕೋಲ್ಕತಾದಲ್ಲಿ ಕಸದ ತೊಟ್ಟಿಯ ಬಳಿ ಎರಡು ಗೋಣಿ ಚೀಲಗಳಲ್ಲಿ ರೂ. 1.60 ಕೋಟಿ ಸಿಕ್ಕಿದೆ. ಸ್ಥಳೀಯರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರದ್ದುಗೊಂಡಿರುವ ರೂ. 500, 1000 ಮುಖಬೆಲೆಯ ನೋಟುಗಳೆಲ್ಲಾ ಅರ್ಧಕ್ಕೆ ಕತ್ತರಿಸಿ ಬಿಸಾಡಲಾಗಿದೆ.

ಇದು ಕಪ್ಪು ಹಣವೇನಾ, ಅಥವಾ ಪಾಕ್ ನಿಂದ ಭಾರತಕ್ಕೆ ಬಂದ ನಕಲಿ ನೋಟುಗಳಾ? ಎಂಬ ವಿಷಯದ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ. ಹಣ ಎಸೆದವರನ್ನು ಪತ್ತೆ ಮಾಡುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ. ಅಷ್ಟು ದೊಡ್ಡ ಮೊತ್ತದ ಹಣ ಅಲ್ಲಿ ಬಿಸಾಡಿದ್ದರಿಂದ ಸ್ಥಳೀಯರು ಭಾರಿ ಸಂಖ್ಯೆಯಲ್ಲಿ ಅಲ್ಲಿ ಸೇರಿದ್ದರು. ಸರ್ಕಾರ ಸರಿಯಾದ ನಿರ್ಧಾರ ಕೈಗೊಂಡಿದೆ, ಆದರೆ ಆ ನೋಟುಗಳನ್ನು ಕತ್ತರಿಸದೆ ಹಾಗೇ ಎಸೆದಿದ್ದರೆ ಕೆಲ ಬಡವರಿಗಾದರೂ ಅನುಕೂಲವಾಗುತ್ತಿತ್ತು ಎಂಬ ಮಾತುಗಳು ಅಲ್ಲಿ  ಕೇಳಿಬರುತ್ತಿತ್ತು.

ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಸಮೀಪ ರಾಷ್ಟ್ರೀಯ ಹೆದ್ದಾರಿ 34 ರಲ್ಲಿ ಪೊಲೀಸರು ಶನಿವಾರ ಕಾರೊಂದರಲ್ಲಿ ರೂ. 1.60 ಕೋಟಿ ಪತ್ತೆ ಹಚ್ಚಿದ್ದಾರೆ. ಎಲ್ಲಾ ರೂ. 1000 ಮುಖಬೆಲೆಯ ನೋಟುಗಳಾಗಿದ್ದು, ಹಣವನ್ನು ವಶಪಡಿಸಿಕೊಂಡಿದ್ದು, ಕಾರಿನಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.