ರಾಜಕಾರಣಿಗಳು, ಉದ್ಯಮಿಗಳ ಮನೆ ಮೇಲೆ ಮುಂದುವರಿದ ತೆರಿಗೆ ಅಧಿಕಾರಿಗಳ ದಾಳಿ – News Mirchi

ರಾಜಕಾರಣಿಗಳು, ಉದ್ಯಮಿಗಳ ಮನೆ ಮೇಲೆ ಮುಂದುವರಿದ ತೆರಿಗೆ ಅಧಿಕಾರಿಗಳ ದಾಳಿ

ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತೆರಿಗೆ ವಂಚಿಸಿರುವ ರಾಜಕಾರಣಿಗಳು ಹಾಗೂ ಉದ್ಯಮಿಗಳ ಮೇಲೆ ನಡೆಸಿರುವ ದಾಳಿಯನ್ನು ತೀವ್ರಗೊಳಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಅವರ ಕಚೇರಿ ಹಾಗೂ ಮನೆಗಳ ಮೇಲೆ ಇಂದು ಬೆಳಗ್ಗೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಲಕ್ಷಣ್ ಅವರ ಚರ್ಚ್ ಸ್ಟ್ರೀಟ್‌ನಲ್ಲಿರುವ ಕಚೇರಿ ಸದಾಶಿವ ನಗರದಲ್ಲಿ ಕಚೇರಿ, ನೀಡಿರುವ ಮನೆ ಹಾಗೂ ಬಸವೇಶ್ವರ ನಗರದಲ್ಲಿನ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ಮೂರು ತಂಡಗಳು ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

ಲಕ್ಷ್ಮಣ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲದೇ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೂ ಅಪ್ತರಾಗಿದ್ದು, ತೆರಿಗೆ ವಂಚನೆ ನಡೆಸಿರುವ ಮಾಹಿತಿ ಆಧರಿಸಿ ಅಧಿಕಾರಿಗಳು ದಾಳಿ ನಡೆಸಿದ್ದು ಅಧಿಕಾರಿಗಳಿಗೆ ತೆರಿಗೆ ಪಾವತಿಸದೇ ಇರುವ ನಗದು,ಚಿನ್ನಾಭರಣ ಇನ್ನಿತರ ಆಸ್ತಿ-ಪಾಸ್ತಿಗಳ ಮಾಹಿತಿ ನೀಡಲು ಲಕ್ಷ್ಮಣ್ ತಡಬಡಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೂರು ತಂಡಗಳು ಬೆಳಗ್ಗೆ 7 ಗಂಟೆಗೆ ದಾಳಿ ನಡೆಸಿ ಮಧ್ಯಾಹ್ನದವರೆಗೆ ತನಿಖೆ ಮುಂದುವರೆಸಿದ್ದು ವಶಪಡಿಸಿಕೊಂಡಿರುವ ದಾಖಲೆ ಮತ್ತು ಕಡತಗಳಲ್ಲಿ ತೆರಿಗೆ ವಂಚನೆ ಮಾಡಿ ಗಳಿಸಿರುವ ಆಸ್ತಿ-ಪಾಸ್ತಿಯನ್ನು ಪರಿಶೀಲನೆ ನಡೆಸಲಾಗುತ್ತಿದೆ.

ತೆರಿಗೆ ಅಧಿಕಾರಿಗಳು ಈ ಹಿಂದೆ ಸಚಿವ ಡಿ.ಕೆ. ಶಿವಕುಮಾರ್ ಆಪ್ತ ವಿಜಯ್ ಮುಳಗುಂದ್, ಪ್ರದೇಶ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಹಲವು ರಾಜಕಾರಣಿಗಳು ಉದ್ಯಮಿಗಳ ಮೇಲೆ ದಾಳಿ ನಡೆಸಿ ತೆರಿಗೆ ವಂಚನೆಯ ಕೋಟ್ಯಾಂತರ ರೂಗಳ ಆಸ್ತಿ-ಪಾಸ್ತಿಯನ್ನು ಪತ್ತೆಹಚ್ಚಿದ್ದರು.

Loading...