27 ಬ್ಯಾಂಕ್ ಅಧಿಕಾರಿಗಳ ಸಸ್ಪೆಂಡ್

***

ದೊಡ್ಡ ನೋಟು ರದ್ದು ನಂತರ ಆರ್‌ಬಿಐ ಆದೇಶ ಉಲ್ಲಂಘಿಸಿ ಅಕ್ರಮ ವ್ಯವಹಾರ ನಡೆಸುತ್ತಿದ್ದ 27 ಜನ ಬ್ಯಾಂಕ್ ಅಧಿಕಾರಿಗಳ ಮೇಲೆ ಕೇಂದ್ರ ಕ್ರಮ ಕೈಗೊಂಡಿದೆ. ವಿವಿಧ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಸೇರಿದ 27 ಬ್ಯಾಂಕ್ ಅಧಿಕಾರಿಗಳನ್ನು ಅಮಾನತು ಮಾಡಿದ್ದು, ಇನ್ನೂ ನಾಲ್ಕು ಅಧಿಕಾರಿಗಳನ್ನು ಅಷ್ಟೇನೂ ಮಹತ್ವವಿಲ್ಲದ ಹುದ್ದೆಗಳಿಗೆ ವರ್ಗಾವಣೆ ಮಾಡಿದ್ದಾಗಿ ಆರ್ಥಿಕ ಸಚಿವಾಲಯ ಹೇಳಿದೆ.

ಕಪ್ಪು ಕುಬೇರರ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ನವೆಂಬರ್ 8 ರಂದು ಗರಿಷ್ಠ ಮುಖ ಬೆಲೆಯ ನೋಟುಗಳನ್ನು ರದ್ದು ಮಾಡುತ್ತಿರುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದು ನಮಗೆಲ್ಲಾ ತಿಳಿದಿದೆ. ಬ್ಯಾಂಕುಗಳಲ್ಲಿ ಹಳೆಯ ನೋಟುಗಳನ್ನು ಬದಲಿಸಿಕೊಳ್ಳಲು, ಡಿಪಾಸಿಟ್ ಮಾಡಲು ನಿಗಧಿತ ಕಾಲಾವಕಾಶ ನೀಡಿದ್ದರು. ಆದರೆ ಈ ಪ್ರಕ್ರಿಯೆಯಲ್ಲಿ ಬ್ಯಾಂಕ್ ಅಧಿಕಾರಿಗಳ ಪಾತ್ರ ತುಂಬಾ ಮುಖ್ಯವಾಗಿತ್ತು. ಆದರೆ ಕೆಲ ಬ್ಯಾಂಕ್ ಅಧಿಕಾರಿಗಳು ಮಾತ್ರ ಆರ್‌ಬಿಐ ಆದೇಶ ಗಾಳಿಗೆ ತೂರಿ ಕಪ್ಪು ಕುಬೇರರಿಗೆ ಸಹಕರಿಸಿರುವುದು ಬಯಲಾಗಿದೆ.

ಇದಕ್ಕೂ ಮುನ್ನ ಬ್ಯಾಂಕ್ ಅಧಿಕಾರಿಗಳೇ ಅಕ್ರಮ ವ್ಯವಹಾರಗಳಿಗೆ ಮುಂದಾಗಿದ್ದು ಗಮನಕ್ಕೆ ಬರುತ್ತಿದ್ದಂತೆ, ಹಲವು ಬಾರಿ ಆರ್‌ಬಿಐ ಎಚ್ಚರಿಸಿತ್ತು. ಬೆಂಗಳೂರಿನಲ್ಲಿ 5.7 ಕೋಟಿ ಹೊಸ ನೋಟುಗಳು ಸರ್ಕಾರಿ ಅಧಿಕಾರಿಗಳ ಬಳಿ ಆದಾಯ ತೆರಿಗೆ ಅಧಿಕಾರಿಗಳು ಪತ್ತೆ ಹಚ್ಚಿದ ನಂತರ, ಬ್ಯಾಂಕ್ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.