ಯೋಧರ ಮೇಲೆ ಕಲ್ಲೆಸೆತ, ಭದ್ರತಾ ಪಡೆಗಳ ಗುಂಡಿಗೆ ಇಬ್ಬರ ಸಾವು

ಶ್ರೀನಗರ್: ಜಮ್ಮೂ ಕಾಶ್ಮೀರದ ಬುದ್ಗಾಂ ಜಿಲ್ಲೆಯ ಚಾದೂರ್ ಪ್ರದೇಶದಲ್ಲಿ ಎನ್ಕೌಂಟರ್ ನಡೆಯುತ್ತಿದ್ದಾಗ, ಕೆಲ ಪ್ರತಿಭಟನಾಕಾರರು ಕಲ್ಲೆಸೆತಕ್ಕೆ ಮುಂದಾದರು. ಹೀಗಾಗಿ ಭದ್ರತಾಪಡೆಗಳು ಅನಿವಾರ್ಯವಾಗಿ ಗುಂಡು ಹಾರಿಸಬೇಕಾಯಿತು. ಭದ್ರತಾ ಪಡೆಗಳ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಭದ್ರತಾ ಸಿಬ್ಬಂದಿ ಮೇಲೆ ದೊಡ್ಡ ಗುಂಪೊಂದು ಕಲ್ಲೆಸೆತಕ್ಕೆ ಮುಂದಾಯಿತು. ಹೀಗಾಗಿ ಅವರನ್ನು ನಿಯಂತ್ರಿಸಲು ಗುಂಡು ಹಾರಿಸಬೇಕಾಯಿತು ಎಂದು ಪೊಲೀಸರು ಪ್ರಕಟಿಸಿದ್ದಾರೆ. ಚಾದೂರ್ ಪ್ರದೇಶದಲ್ಲಿ ಉಗ್ರರಿರುವ ಮಾಹಿತಿ ಪಡೆದು ಭದ್ರತಾ ಪಡೆಗಳು ಇಂದು ಬೆಳಗ್ಗೆ ಶೋಧ ಕಾರ್ಯಚರಣೆ ನಡೆಸಿದ್ದಾಗಿ ಪೊಲೀಸರು ಹೇಳಿದ್ದಾರೆ.