ಬೆಳಗಾವಿ ಅಧಿವೇಶನವನ್ನು ಬಹಿಷ್ಕರಿಸುವ ಬಿಜೆಪಿಯ ಬೆದರಿಕೆಗೆ ಬಗ್ಗುವುದಿಲ್ಲ : ಡಾ. ಜಿ. ಪರಮೇಶ್ವರ್ – News Mirchi

ಬೆಳಗಾವಿ ಅಧಿವೇಶನವನ್ನು ಬಹಿಷ್ಕರಿಸುವ ಬಿಜೆಪಿಯ ಬೆದರಿಕೆಗೆ ಬಗ್ಗುವುದಿಲ್ಲ : ಡಾ. ಜಿ. ಪರಮೇಶ್ವರ್

ಬೆಂಗಳೂರು :  ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಮೇಲೆ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎಫ್‌ಐಆರ್ ದಾಖಲಿಸಿರುವ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ಬೆಳಗಾವಿ ಅಧಿವೇಶನವನ್ನು ಬಹಿಷ್ಕರಿಸುವ ಬಿಜೆಪಿಯ ಬೆದರಿಕೆಗೆ ಬಗ್ಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷರಾಗಿ 7 ವರ್ಷ ಪೂರೈಸಿ 8ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಮಾಧ್ಯಮದವರೊಂದಿಗೆ  ಮಾತನಾಡಿ ಜಾರ್ಜ್ ರಾಜೀನಾಮೆ ನೀಡದಿದ್ದರೆ ಅಧಿವೇಶನ ಬಹಿಷ್ಕರಿಸುವುದಾಗಿ ಬಿಜೆಪಿ ಹೇಳುತ್ತಿರುವುದು ಅರ್ಥವಿಲ್ಲದ್ದು, ಹಾಗೊಂದು ವೇಳೆ ಬಹಿಷ್ಕರಿಸುವುದು ಆ ಪಕ್ಷಕ್ಕೆ ಬಿಟ್ಟ ವಿಷಯ. ಶಾಸಕರಾಗಿ ಅಧಿವೇಶನದಲ್ಲಿ ಭಾಗವಹಿಸುವುದು, ನಾಡಿನ ಸಮಸ್ಯೆಗಳ ಬಗ್ಗೆ ಚರ್ಚಿಸುವುದು ಅವರ ಕರ್ತವ್ಯ ಕೂಡ. ಯಾವುದೇ ಕಾರಣಕ್ಕೂ ಜಾರ್ಜ್ ರಾಜೀನಾಮೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಒಮ್ಮೆ ಎಫ್‌ಐಆರ್ ದಾಖಲಾದ ಮೇಲೆ ಅದೇ ಪ್ರಕರಣದಲ್ಲಿ ಮತ್ತೊಮ್ಮೆ ಎಫ್‌ಐಆರ್ ದಾಖಲಿಸಲು ಬರುವುದಿಲ್ಲ. ಕನಿಷ್ಠ ಪ್ರಜ್ಞೆ ಬಿಜೆಪಿ ನಾಯಕರಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಜಾರ್ಜ್ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದರು.

ಕೇಂದ್ರ ಸಚಿವರು, ಸಂಸದರು ಸೇರಿದಂತೆ ಬಿಜೆಪಿಯ ಅನೇಕ ಮುಖಂಡರುಗಳ ಮೇಲೆ ಎಫ್‌ಐಆರ್ ದಾಖಲಾಗಿದೆ. ಮೊದಲು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಆ ಬಳಿಕ ಸಚಿವ ಜಾರ್ಜ್ ರಾಜೀನಾಮೆ ಕೇಳಲಿ ಎಂದರು. ಇದೇ ವೇಳೆ ಕಾಂಗ್ರೆಸ್ ಪಕ್ಷ 2018ರ ವಿಧಾನಸಭಾ ಚುನಾವಣೆಯಲ್ಲಿ ಮರಳಿ ಅಧಿಕಾರಕ್ಕೆ ಬರಲಿದೆ ಎಂದು ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಾಮೂಹಿಕವಾಗಿ ಚುನಾವಣೆಯನ್ನು ಎದುರಿಸಿ ಮತ್ತೆ ಅಧಿಕಾರಕ್ಕೆ ತರುವುದು ನಮ್ಮ ಉದ್ದೇಶ. ಈ ಬಗ್ಗೆ ಯಾರಿಗೂ ಗೊಂದಲ ಬೇಡ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಸ್ವಂತ ಬಲದಿಂದ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯಲಿದೆ. ಹೀಗಾಗಿ ಸಮ್ಮಿಶ್ರ ಸರ್ಕಾರ ರಚನೆಯ ಪ್ರಮೇಯವೇ ಎದುರಾಗುವುದಿಲ್ಲ. ಕೆಲವು ಈ ರೀತಿ ಭಾವಿಸಿದರೆ ಅದು ಅವರ ಕಲ್ಪನೆಯಷ್ಟೆ ಎಂದರು.

 

 

 

Get Latest updates on WhatsApp. Send ‘Add Me’ to 8550851559

Loading...