ಕ್ಯಾಶ್​ಲೆಸ್​ ಮೂಲಕ ಡಿಜಿಟಲೀಕರಣಕ್ಕೆ ಒತ್ತು ನೀಡುವ ಅವಶ್ಯಕತೆ : ಪ್ರಧಾನಿ ನರೇಂದ್ರ ಮೋದಿ – News Mirchi

ಕ್ಯಾಶ್​ಲೆಸ್​ ಮೂಲಕ ಡಿಜಿಟಲೀಕರಣಕ್ಕೆ ಒತ್ತು ನೀಡುವ ಅವಶ್ಯಕತೆ : ಪ್ರಧಾನಿ ನರೇಂದ್ರ ಮೋದಿ

ಮಂಗಳೂರು : ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗಬೇಕು. ಅಂತೆಯೇ ಕ್ಯಾಶ್​ಲೆಸ್​ ಮೂಲಕ ಡಿಜಿಟಲೀಕರಣಕ್ಕೆ ಒತ್ತು ನೀಡುವ ಅವಶ್ಯಕತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕ ಭೇಟಿ ನೀಡಿದರು. ಈ ಸಂದರ್ಭ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಪ್ರಧಾನಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ  ಪ್ರಧಾನಿಯವರು ಶ್ರೀ ಮಂಜುನಾಥನ ದರ್ಶನವನ್ನು ಪಡೆದು ವಿಶೇಷ ಪೂಜೆಯನ್ನು ಸಲ್ಲಿಸಿದರು. ಬಳಿಕ ಉಜಿರೆಯ ರತ್ನವರ್ಮ ಕ್ರೀಡಾಂಗಣದ ವೇದಿಕೆಯಲ್ಲಿ ಆಯೋಜಿಸಲಾದ ಸಮಾವೇಶದಲ್ಲಿ ಪಾಲ್ಗೊಂಡ ಅವರು 12ಲಕ್ಷ ಮಹಿಳೆಯರಿಗೆ ರೂಪೆ ಕಾರ್ಡ್ ನ್ನು ಸಾಂಕೇತಿಕವಾಗಿ ವಿತರಿಸಿದರು. ಬಳಿಕ ಕನ್ನಡದಲ್ಲಿಯೇ ಮಾತನ್ನಾರಂಭಿಸಿದ ಅವರು ನಮೋ ಮಂಜುನಾಥ ಎಂದರಲ್ಲದೇ  ನನ್ನ ಪ್ರೀತಿಯ ಬಂಧು-ಭಗಿನಿಯರೇ,  ನನ್ನ ಪ್ರೀತಿಯ ಸಹೋದರಿಯರೇ ನಿಮಗೆಲ್ಲ ವಿಶೇಷ ಅಭಿನಂದನೆ ಎಂದರು. ಬಳಿಕ  ಡಾ,ಡಿ.ವೀರೇಂದ್ರ ಹೆಗ್ಗಡೆಯವರನ್ನು ಶ್ಲಾಘಿಸಿ ಅವರನ್ನು ಸನ್ಮಾನಿಸಿದರು. ಅವರನ್ನು  ಸನ್ಮಾನಿಸುವ ಹಕ್ಕು ನನಗಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ 125ಕೋಟಿ ಜನರ ಪ್ರಧಾನ ಸೇವಕನಾಗಿ ಅವರನ್ನು ಸನ್ಮಾನಿಸಿದ್ದೇನೆ. ಇದು ನನ್ನ ಸೌಭಾಗ್ಯ. ಅವರು ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಆಧ್ಯಾತ್ಮಿಕ ಕ್ಷೇತ್ರಕ್ಕೆ ತನ್ನನ್ನು ತೊಡಗಿಸಿಕೊಂಡವರು. ಸದಾ ಮಂದಹಾಸದಿಂದ ಕೂಡಿರುವ ಸರಳ,ಸಜ್ಜನಿಕೆಯ ವ್ಯಕ್ತಿ ಎಂದು ಬಣ್ಣಿಸಿದರು.  ತಮ್ಮ ಚಿಂತನೆ ಹಾಗೂ ಕೌಶಲ್ಯಗಳಿಂದ ಕ್ಷೇತ್ರ ಅಭಿವೃದ್ಧಿಪಡಿಸಿದ್ದಾರೆ. ಕೌಶಲ್ಯಾಭಿವೃದ್ಧಿಗೆ ಡಾ.ವೀರೇಂದ್ರ ಹೆಗ್ಗಡೆ  ಅವರೇ ಮಾದರಿ ಎಂದು ಹೇಳಿದರು.

ಧರ್ಮಸ್ಥಳ ಆಧ್ಯಾತ್ಮಿಕ ಕೇಂದ್ರವಾಗಬೇಕು ಎಂದರು.  ನಮ್ಮ ಸಂಪ್ರದಾಯ ಬಗ್ಗೆ ಇನ್ನೂ ಸಂಶೋಧನೆಯಾಗಬೇಕಿದೆ. ನಾನು ಎಲ್ಲ ವಿವಿಗಳನ್ನು ಆಹ್ವಾನಿಸುತ್ತೇನೆ. ಡಾ.ಹೆಗ್ಗಡೆಯವರ ಕಾರ್ಯವೈಖರಿ ಅಧ್ಯಯನವಾಗಬೇಕು. ಅವರ ಆರ್ಥಿಕ ನಿರ್ವಹಣೆ, ಪಾರದರ್ಶಕತೆ, ಜನತೆಯಲ್ಲಿ ಪರಿವರ್ತನೆ ತರುವುದರ ಬಗ್ಗೆ ವಿಶ್ವ ವಿದ್ಯಾಲಯಗಳು  ಅಧ್ಯಯನ ಮಾಡಬೇಕು  ಎಂದು  ಹೇಳಿದರು. ವಿವಿಗಳು ಆಧ್ಯಾತ್ಮಿಕತೆಯನ್ನು ಅಧ್ಯಯನ ಮಾಡಬೇಕು ಎಂದು ಹೇಳಿದರು. ಪರೋಕ್ಷವಾಗಿ ವಿಪಕ್ಷಗಳಿಗೆ ಕುಟುಕಿದ ಮೋದಿ, ಸದನದಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳು ಕ್ಯಾಶ್​ಲೆಸ್​ ಬಗ್ಗೆ ಮಾತನಾಡುತ್ತಾರೆ. ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗಬೇಕು. ಅಂತೆಯೇ ಕ್ಯಾಶ್​ಲೆಸ್​ ಮೂಲಕ ಡಿಜಿಟಲೀಕರಣಕ್ಕೆ ಒತ್ತು ನೀಡುವ ಅವಶ್ಯಕತೆ ಇದೆ ಡಾ.ಹೆಗ್ಗಡೆಯವರು ನವಭಾರತ ನಿರ್ಮಾಣಕ್ಕೆ ಸಾಥ್​ ನೀಡಿದ್ದಾರೆ. ದೇಶಕ್ಕೆ ಉಪಯೋಗವಾಗುವ ಕೆಲಸಕ್ಕೆ ಕೈಜೋಡಿಸಿದ್ದಾರೆ. ದೇಶದಲ್ಲಿ ಇಷ್ಟೊಂದು ಬಡತನವಿದೆ ಇಂತಹ ಪರಿಸ್ಥಿತಿಯಲ್ಲಿ ವೀರೇಂದ್ರ ಹೆಗ್ಗಡೆಯವರ ಜನಪರ ಯೋಜನೆಗಳು ಎಲ್ಲರಿಗೂ ಮಾದರಿ ಎಂದರು. ಭೂ ಮಾತೆ ರಕ್ಷಣೆಗೆ ಮಕ್ಕಳು ನಾವು ಮುಂದಾಗಬೇಕು. ಮರಗಳಿಂದ ನಮಗೆ ಸ್ವಚ್ಛಗಾಳಿ ದೊರೆಯುತ್ತದೆ. ಅವುಗಳನ್ನು ಲಾಲನೆ ಪಾಲನೆ ಮಾಡುವುದು ನಮ್ಮ ಕರ್ತವ್ಯ. ಯೂರಿಯಾ ಬಳಕೆ ಕಡಿಮೆ ಮಾಡಲು ಶಪಥ ಮಾಡೋಣ. 2022ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷಗಳಾಗುತ್ತವೆ. ಆ ವೇಳೆ ಭಾರತ ಕೃಷಿ ಕ್ಷೇತ್ರದಲ್ಲಿ ರಾಸಾಯನಿಕಗಳ ಬಳಕೆ ಮುಕ್ತವಾಗಿರಬೇಕು ಎಂದು ಸಾವಯವ ಕೃಷಿಯತ್ತ ಪ್ರಧಾನಿ ತಮ್ಮ ಒಲವು ವ್ಯಕ್ತಪಡಿಸಿದರು.

 

 

 

 

Get Latest updates on WhatsApp. Send ‘Add Me’ to 8550851559

Loading...