ಯೋಗಿ ಕ್ಷೇತ್ರದಲ್ಲಿ 30 ಮಕ್ಕಳ ದಾರುಣ ಸಾವು – News Mirchi

ಯೋಗಿ ಕ್ಷೇತ್ರದಲ್ಲಿ 30 ಮಕ್ಕಳ ದಾರುಣ ಸಾವು

ಲಕ್ನೋ: ಉತ್ತರಪ್ರದೇಶದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಸಂಭವಿಸಿದೆ. ಆಸ್ಪತ್ರೆಯೊಂದರಲ್ಲಿ 48 ಗಂಟೆಗಳಲ್ಲಿ 30 ಮಕ್ಕಳು ಸಾವಿಗೀಡಾಗಿದ್ದಾರೆ. ಮೆದುಳು ಸಂಬಂಧಿ ವ್ಯಾಧಿಯಿಂದ ಬಳುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳು ಆಮ್ಲಜನಕದ ಕೊರತೆಯಿಂದಲೇ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿನಿಧಿಸುತ್ತಿದ್ದ ಲೋಕಸಭಾ ಕ್ಷೇತ್ರದಲ್ಲೇ ಈ ಘಟನೆ ನಡೆದಿದೆ. ಗೋರಖ್ ಪುರದ ಬಿ.ಆರ್.ಡಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಈ ದುರ್ಘಟನೆ ನಡೆದಿದೆ ಎಂದು ಜಿಲ್ಲಾಧಿಕಾರಿ ರಾಜೀವ್ ರೌಟೆಲಾ ಹೇಳಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಸಿಎಂ ಯೋಗಿ ಆದಿತ್ಯನಾಥ್ ಈ ಆಸ್ಪತ್ರೆಗೆ ಬಂದು ಪರಿಶೀಲಿಸಿದ್ದರು. ಈ ಸಂದರ್ಭದಲ್ಲಿ ಅಲ್ಲಿದ್ದವರು ಸಮಸ್ಯೆಗಳನ್ನು ಮುಖ್ಯಮಂತ್ರಿ ಬಳಿ ಹೇಳಿದ್ದು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಯೋಗಿ ಆದಿತ್ಯನಾಥ್ ಭರವಸೆ ನೀಡಿದ್ದರು.

ಆಸ್ಪತ್ರೆ ಮೂಲಗಳ ಪ್ರಕಾರ ಆಮ್ಲಜನಕ ಸರಬರಾಜು ಮಾಡುತ್ತಿದ್ದ ಕಂಪನಿಗೆ ಆಸ್ಪತ್ರೆಯು ರೂ.66 ಲಕ್ಷ ಬಾಕಿ ಉಳಿಸಿಕೊಂಡಿತ್ತು. ಹೀಗಾಗಿ ಆ ಕಂಪನಿಯು ಆಮ್ಲಜನಕ ಸರಬರಾಜನ್ನು ನಿಲ್ಲಿಸಿತ್ತು. ಇದು ಇಷ್ಟು ಮಕ್ಕಳ ಸಾವಿಗೆ ಕಾರಣವಾಗಿದೆ. ಘಟನೆಗೆ ಆಸ್ಪತ್ರೆ ಮತ್ತು ಸರ್ಕಾರದ ನಿರ್ಲಕ್ಷ್ಯ ಸ್ಪಷ್ಟವಾಗಿ ಕಂಡುಬರುತ್ತಿದೆ. ಇನ್ನೂ 45 ಮಕ್ಕಳು ವೆಂಟಿಲೇಷನ್ ಮೇಲೆ ಇದ್ದಾರೆಂದು ಹೇಳಲಾಗುತ್ತಿದೆ.

ಆದರೆ ಘಟನೆ ಕುರಿತು ಪ್ರತಿಕ್ರಿಯಿಸಿರುವ ವೈದ್ಯಕೀಯ ಶಿಕ್ಷಣ ಸಚಿವರು ಮಕ್ಕಳ ಸಾವಿಗೆ ಆಮ್ಲಜನಕದ ಕೊರತೆ ಕಾರಣವಲ್ಲ. ಘಟನೆ ಕುರಿತು ತನಿಖೆಗೆ ಜಿಲ್ಲಾಡಳಿತ ಆದೇಶಿಸಿದ್ದು, 24 ಗಂಟೆಗಳಲ್ಲಿ ವರದಿ ಹೊರಬೀಳಲಿದೆ ಎಂದು ಹೇಳಿದ್ದಾರೆ.

Loading...