ಹೊಯ್ಸಳ ಪೊಲೀಸರ ಮೇಲೆ ದುಷ್ಕರ್ಮಿಗಳ ದಾಳಿ – News Mirchi

ಹೊಯ್ಸಳ ಪೊಲೀಸರ ಮೇಲೆ ದುಷ್ಕರ್ಮಿಗಳ ದಾಳಿ

ಬೆಂಗಳೂರು :   ನಗರದಲ್ಲಿ ಸುಲಿಗೆಕೋರರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೊಯ್ಸಳ ಪೊಲೀಸರ ಮೇಲೆ ರಸ್ತೆ ಬದಿಯಲ್ಲಿ ನಿಲ್ಲಿಸುವ ಕ್ಯಾಬ್‌ಗಳಲ್ಲಿ ಸುಲಿಗೆ ಮಾಡುತ್ತಿದ್ದ ದುಷ್ಕರ್ಮಿಗಳ ತಂಡವೊಂದು ದಾಳಿ ಮಾಡಿರುವ ಘಟನೆ ನಡೆದಿದೆ.

ಗೃಹರಕ್ಷಕದಳದ ಹನುಮಂತರಾಜು ದುಷ್ಕರ್ಮಿಗಳ ಹಲ್ಲೆಯಿಂದ ಗಾಯಗೊಂಡಿದ್ದು,  ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಯ್ಸಳದಲ್ಲಿದ್ದ ಎಎಸ್‌ಐ ಮೋಪುರಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.  ಎರಡು ಡಿಯೋ ಸ್ಕೂಟರ್‌ಗಳಲ್ಲಿ ಬಂದ ನಾಲ್ವರು ಮುಸುಕುಧಾರಿ ಸುಲಿಗೆಕೋರರು ಬಿಇಎಲ್ ಸರ್ಕಲ್ ಬಳಿ  ರಸ್ತೆ ಬದಿ ನಿಲ್ಲಿಸಿದ್ದ ಕ್ಯಾಬ್ ಚಾಲಕರಿಗೆ ಲಾಂಗ್ ಮಚ್ಚುಗಳನ್ನು ತೋರಿಸಿ ಹಣ, ಪರ್ಸ್, ಮೊಬೈಲ್ ಕಸಿದುಕೊಂಡು ಬಿಇಎಲ್ ಸರ್ಕಲ್‌ನಿಂದ ಗಂಗಮ್ಮನಗುಡಿ ಸರ್ಕಲ್ ಕಡೆಗೆ ಪರಾರಿಯಾಗಿದ್ದಾರೆ. ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ  ಹಣ ಕಳೆದುಕೊಂಡ ಕ್ಯಾಬ್ ಚಾಲಕರೊಬ್ಬರು ಕೂಡಲೇ ದೂರು ನೀಡಿದ್ದರು. ದರೋಡೆಕೋರರ ಬೆನ್ನತ್ತಿ ಅಡ್ಡಗಟ್ಟಿ ಸ್ಕೂಟರ್‌ಗಳನ್ನು ನಿಲ್ಲಿಸಿದ ರಾತ್ರಿ ಗಸ್ತಿನಲ್ಲಿದ್ದ ಜಾಲಹಳ್ಳಿ ಪೊಲೀಸ್ ಹೊಯ್ಸಳ ಸಿಬ್ಬಂದಿ ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ ತಮ್ಮ ಬಳಿಯಿದ್ದ ಲಾಂಗ್ ಮಚ್ಚಿನಿಂದ ದರೋಡೆಕೋರರು ಅವರ ಮೇಲೆ ಹಲ್ಲೆ ಮಾಡಿದ್ದಾರೆ.

ಹಲ್ಲೆಯಿಂದ ಹನುಮಂತರಾಜು ತಲೆಗೆ ಗಾಯವಾಗಿ ಕುಸಿದು ಬಿದ್ದಿದ್ದಾರೆ.  ಎಎಸ್‌ಐ ಮೋಪುರಿ ಕಡೆಗೆ ಲಾಂಗ್ ಬೀಸಿ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಹೆಚ್ಚಿನ ಪೊಲೀಸ್ ಸಿಬ್ಬಂದಿ ಗಾಯಗೊಂಡ ಹನುಮಂತರಾಜು ಅವರನ್ನು ಕೆ ಸಿ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

 

 

 

 

Get Latest updates on WhatsApp. Send ‘Add Me’ to 8550851559

Loading...