ಅಲ್ಪ ಸಂಖ್ಯಾತ ವಿದ್ಯಾರ್ಥಿನಿಯರಿಗೆ ಶೇ.40 ರಷ್ಟು ಮೀಸಲಾತಿ

ನವದೆಹಲಿ: ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗೆ ಉತ್ತಮ ಶಿಕ್ಷಣ ಕಲ್ಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. 100 ನವೋದಯ ಮಾದರಿಯ ಪಾಠಶಾಲೆಗಳು, ಐದು ಶಿಕ್ಷಣ ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗೆ ಶೇ.40 ರಷ್ಟು ಮೀಸಲಾತಿ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಎಂದು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

ನಾವು ಅಲ್ಪಸಂಖ್ಯಾತ ಸಮುದಾಯದ ಏಳಿಗೆಗಾಗಿ ಬದ್ಧರಾಗಿದ್ದು, ಶಿಕ್ಷಣ ಕ್ಷೇತ್ರದ ಮೇಲೆ ಹೆಚ್ಚು ಗಮನ ಹರಿಸಿದ್ದೇವೆ. ಅಲ್ಪ ಸಂಖ್ಯಾತ ವಿದ್ಯಾರ್ಥಿನಿಯರು ಶಿಕ್ಷಣವನ್ನು ಪೂರ್ಣಗೊಳಿಸಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ನಖ್ವಿ ಹೇಳಿದ್ದಾರೆ. ಇದಕ್ಕಾಗಿ ಅಲ್ಪಸಂಖ್ಯಾತ ಬಾಹುಳ್ಯದ ಪ್ರದೇಶಗಳಲ್ಲಿ 100 ನವೋದಯ ಮಾದರಿ ಶಾಲೆಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಎಂದು ನಖ್ವಿ ಹೇಳಿದ್ದಾರೆ.

ಉನ್ನತ ಶಿಕ್ಷಣ ಸಂಸ್ಥೆಗಳ ನಿರ್ಮಾಣಕ್ಕೆ ಉತ್ತರ ಪ್ರದೇಶ, ರಾಜಸ್ಥಾನ ಸರ್ಕಾರಗಳು ಆಸಕ್ತಿ ತೋರಿವೆ ಎಂದು ಹೇಳಿರುವ ಸಚಿವರು, ಮುಖ್ಯವಾಗಿ ಶೈಕ್ಷಣಿಕ ವಾಗಿ ಹಿಂದುಳಿದ ಮುಸ್ಲಿಮರಿಗಾಗಿ ಮೌಲಾನಾ ಆಜಾದ್ ಎಜುಕೇಷನ್ ಫೌಂಡೇಷನ್ ನೇಮಕ ಮಾಡಿದ ಉನ್ನತ ಮಟ್ಟದ ಸಮಿತಿಯು ಮೂರು ಹಂತದ ನೀತಿಯನ್ನು ಪ್ರಸ್ತಾಪಿಸಿದೆ. ಕೇಂದ್ರೀಯ/ನವೋದಯ ರೀತಿಯ ಬೋಧನಾ ನೀತಿಯೊಂದಿಗೆ ಪ್ರಾಥಮಿಕ, ಸೆಕೆಂಡರಿ, ಉನ್ನತ ಮಟ್ಟದ 211 ಪಾಠಶಾಲೆಗಳು, 25 ಸಮುದಾಯ ಕಾಲೇಜುಗಳು, ಐದು ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಲು ಸಮಿತಿಯು ಸೂಚಿಸಿದೆ.