ವಾಟ್ಸಾಪ್ ನಲ್ಲಿ ಬರಲಿರುವ 6 ಹೊಸ ಫೀಚರ್ ಗಳು ಹೇಗಿವೆ ಗೊತ್ತೇ?

100 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ಈಗ ಕೆಲವು ಹೊಸ ಫೀಚರ್ ಗಳನ್ನು ಪರಿಚಯಿಸಲು ಹೊರಟಿದೆ. ಸದ್ಯ ಇವು ಬೀಟಾ ಆವೃತ್ತಿಯಲ್ಲಿ ಮಾತ್ರ ಲಭ್ಯವಿದ್ದು, ಶೀಘ್ರದಲ್ಲೇ 6 ಹೊಸ ಫೀಚರ್ ಗಳು ಎಲ್ಲಾ ಬಳಕೆದಾರರಿಗೂ ಈ ಫೀಚರ್ ಗಳು ಲಭ್ಯವಾಗಲಿವೆ. ಆ ಆರು ಹೊಸ ಫೀಚರ್ ಗಳೇನು ಎಂಬುದನ್ನು ತಿಳಿಯೋಣ ಬನ್ನಿ.

ಯೂಟ್ಯೂಬ್ ವೀಡಿಯೋ ವೀಕ್ಷಿಸಿ ವಾಟ್ಸಾಪ್ ನಲ್ಲೇ…

ವಾಟ್ಸಾಪ್ ನಲ್ಲಿ ಹೊಸ ಸೇರ್ಪಡೆ ಯೂಟ್ಯೂಬ್ ಇಂಟಿಗ್ರೇಷನ್. ಈ ಫೀಚರ್ ನೊಂದಿಗೆ ಪಿಕ್ಚರ್-ಇನ್-ಪಿಕ್ಚರ್ ಮೋಡ್ ಮೂಲಕ ಆಪ್ ನಿಂದ ಹೊರಗೆ ಹೋಗದೆಯೇ ವಾಟ್ಸಾಪ್ ನಲ್ಲಿ ಯೂಟ್ಯೂಬ್ ವೀಡಿಯೋ ವಿಕ್ಷಿಸಬಹುದು.

ಯುಪಿಐ ಆಧಾರಿತ ಹಣ ವರ್ಗಾವಣೆ

ಸದ್ಯ ಯುಪಿಐ ಆಧಾರದ ಮೇಲೆ ಹಣದ ಲಾವಾದೇವಿಗಳು ನಡೆಯುತ್ತಿರುವುದರಿಂದ, ವಾಟ್ಸಾಪ್ ಪ್ಲಾಟ್ ಫಾರ್ಮ್ ನಲ್ಲಿಯೂ ಈ ಸೌಲಭ್ಯ ಸೇರ್ಪಡೆ ಮಾಡಬೇಕೆಂದು ವಾಟ್ಸಾಪ್ ಮುಂದಾಗಿದೆ. ಇದರಿಂದಾಗಿ ಲಕ್ಷಾಂತರ ಭಾರತೀಯರನ್ನು ಆಕರ್ಷಿಸಬಹುದು ಎಂದು ಸಂಸ್ಥೆಯ ಲೆಕ್ಕಾಚಾರ. ಇದರ ಸುಲಭವಾಗಿ ಹಣ ವರ್ಗಾವಣೆ ಮಾಡಬಹುದು, ಸದ್ಯ ಸಂಸ್ಥೆಯು ಯುಪಿಐ ಇಂಟಿಗ್ರೇಷನ್ ಗಾಗಿ ಸರ್ಕಾರದೊಂದಿಗೆ ಚರ್ಚೆ ನಡೆಸುತ್ತಿದೆ.

ಮೆಸೇಜ್ ರೀಕಾಲ್ ಸೌಲಭ್ಯ

ಈ ಫೀಚರ್ 2016 ರ ಡಿಸೆಂಬರ್ ನಲ್ಲಿಯೇ ಐಒಎಸ್ ಬೀಟಾ ಆವೃತ್ತಿಯಲ್ಲಿ ಬಿಡುಗಡೆಯಾಗಿದೆ. ವಾಟ್ಸಾಪ್ ನಲ್ಲಿ ಕಳುಹಿಸಿದ ಸಂದೇಶಗಳನ್ನು ಹಿಂಪಡೆಯಬಹುದು ಅಂದರೆ ಅಳಿಸಲು ಈ ಫೀಚರ್ ಸಹಾಯಕಾರಿ. ಆಕಸ್ಮಿಕವಾಗಿ ಕಳುಹಿಸಿದ ಸಂದೇಶಗಳು, ವೀಡಿಯೋ, ಚಿತ್ರಗಳನ್ನು ಹಿಂಪಡೆಯಲು 5 ನಿಮಿಷ ಸಮಯವಿರುತ್ತದೆ. ಈಗ ನಾವು ಆಕಸ್ಮಿಕವಾಗಿ ಯಾವುದಾದರೂ ಸಂದೇಶ ಕಳುಹಿಸಿ ಅದನ್ನು ಅಳಿಸಲು ಸಾಧ್ಯವಿಲ್ಲ. ಶೀಘ್ರದಲ್ಲಿಯೇ ಈ ಸೌಲಭ್ಯ ಸೇರ್ಪಡೆಯಾಗುತ್ತದೆ.

ಲೈವ್ ಲೊಕೇಷನ್ ಶೇರಿಂಗ್

ಈ ವರ್ಷದಾರಂಭದಲ್ಲಿ ಐಒಎಸ್ ಬೀಟಾ ಆವೃತ್ತಿಯಲ್ಲಿ ಬಂದ ಮತ್ತೊಂದು ಫೀಚರ್ ಇದು. ಇದು ಈಗಲೇ ಎಲ್ಲಾ ಬಳಕೆದಾರರಿಗೂ ಲಭ್ಯವಾಗದೇ ಇರಬಹುದು. ಆದರೆ ಮುಂದಿನ ದಿನಗಳಲ್ಲಿ ಇದು ಎಲ್ಲರಿಗೂ ಲಭ್ಯವಾಗುತ್ತದೆ. ಈ ಫೀಚರ್ ನಿಂದಾಗಿ ಬಳಕೆದಾರರು ಒಂದು ನಿಮಿಷ, ಎರಡು ನಿಮಿಷ, ಐದು ನಿಮಿಷ ಅಥವಾ ಮಿತಿಯಿಲ್ಲದೆ ಲೈವ್ ಲೊಕೇಷನ್ ಶೇರ್ ಮಾಡಬಹುದು.

ಮೊಬೈಲ್ ಸಂಖ್ಯೆ ಬದಲಾದರೆ….

ವಾಟ್ಸಾಪ್ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆ ಬದಲಾಯಿಸಿದ ಸಂದರ್ಭದಲ್ಲಿ, ತಮ್ಮ ವಾಟ್ಸಾಪ್ ನಲ್ಲಿರುವ ಎಲ್ಲಾ ಸ್ನೇಹಿತರಿಗೂ ತಿಳಿಯುವಂತೆ ಈ ಫೀಚರ್ ಮೂಲಕ ನೋಟಿಫಿಕೇಷನ್ ಗಳು ಹೋಗುತ್ತವೆ. ಇದೂ ಕೂಡಾ ಸದ್ಯ ಬೀಟಾ ಆವೃತ್ತಿಯಲ್ಲಿ ಬಿಡುಗಡೆ ಮಾಡಲಾಗಿದೆ.

ಎಡಿಟ್ ‘ಸೆಂಟ್’ ಫೀಚರ್

ಈ ಫೀಚರ್ ಕೂಡಾ ರೀಕಾಲ್ ನಂತೆಯೇ ಕೆಲಸ ಮಾಡುತ್ತದೆ. ಆದರೆ ಸಂದೇಶದಲ್ಲಿ ಏನಾದರೂ ತಪ್ಪುಗಳಿದ್ದರೆ ಪೂರ್ತಿ ಮೆಸೇಜ್ ಅನ್ನು ಅಳಿಸಲು ಅಥವಾ ಹಿಂಪಡೆಯುವ ಬದಲು, ಸಂದೇಶದಲ್ಲಿ ಏನಾದರೂ ಬದಲಾವನೆ ಮಾಡಿಕೊಳ್ಳಲು ಇಚ್ಚಿಸಿದರೆ ಅವಕಾಶ ಕಲ್ಪಿಸಲಿದೆ.