ಕ್ಯಾಸ್ಟ್ರೋನನ್ನು ಕೊಲ್ಲಲು 638 ಬಾರಿ ಯತ್ನಿಸಿದ್ದ ಅಮೆರಿಕಾ!

ಅಮೆರಿಕಾ ತನ್ನ ಆಜನ್ಮ ಶತೃವಾದ ಕ್ಯೂಬಾ ಮಾಜಿ ಅಧ್ಯಕ್ಷ, ಕ್ರಾಂತಿಕಾರಿ ಯೋಧ ಫಿಡೆಲ್ ಕ್ಯಾಸ್ಟ್ರೋ ನನ್ನು ಕೊಲ್ಲಲು ಮಾಡದ ಪ್ರಯತ್ನವಿಲ್ಲ. ಕ್ಯಾಸ್ಟ್ರೋನನ್ನು ಕೊಲ್ಲಲು ಅಮೆರಿಕಾ 600 ಕ್ಕೂ ಹೆಚ್ಚು ಬಾರಿ ಕೊಲ್ಲಲು ಪ್ರಯತ್ನಿಸಿ ವಿಫಲವಾಗಿದೆ ಎಂದು ಇತಿಹಾಸ ಹೇಳುತ್ತಿದೆ. ಸಿಗಾರ್‌ಗಳಲ್ಲಿ ವಿಷ ತುಂಬುವ ಮೂಲಕ, ಸುಂದರವಾದ ಹುಡುಗಿಯರಿಂದ ಮತ್ತು ಮಾಜಿ ಪತ್ನಿಯರಿಂದ ವಿಷದ ಗುಳಿಗೆಗಳನ್ನು ತಿನ್ನಿಸುವ ಮೂಲಕ, ಬಾಂಬು ಬಳಸುವ ಮೂಲಕ, ಮಾಫಿಯಾ ಶೈಲಿಯಲ್ಲಿ ಕ್ಯಾಸ್ಟ್ರೋನನ್ನು ಕೊಲ್ಲಲು ಅಮೆರಿಕದ ಸಿಐಎ ಪ್ರಯತ್ನಿಸಿತ್ತು.

ಅಮೆರಿಕಾ ಮಾಜಿ ಅಧ್ಯಕ್ಷ ಜೆಎಫ್ ಕೆನಡಿ, ಕ್ಯಾಸ್ಟ್ರೋನನ್ನು ಕೊಲ್ಲಲು ‘ಆಪರೇಷನ್ ಮಂಗೂಸ್’ ಹೆಸರಿನಲ್ಲಿ ದೊಡ್ಡ ವ್ಯೂಹವನ್ನೇ ರಚಿಸಿದ್ದರು. ಆದರೆ ಆ ಎಲ್ಲಾ ಪ್ರಯತ್ನಗಳಲ್ಲೂ ಜೇಮ್ಸ್ ಬಾಂಡ್ ಗಿಂತಲೂ ಹೆಚ್ಚು ಬುದ್ದಿವಂತಿಕೆಯಿಂದ ತಪ್ಪಿಸಿಕೊಂಡಿದ್ದ ಕ್ಯಾಸ್ಟ್ರೋ. ಇತ್ತೀಚೆಗೆ ತನ್ನ ಮೇಲಾದ ಹತ್ಯಾ ಪ್ರಯತ್ನಗಳ ಕುರಿತು ಪ್ರಸ್ತಾಪಿಸಿದ್ದ ಕ್ಯಾಸ್ಟ್ರೋ, ಹತ್ಯಾಯತ್ನಗಳಿಂದ ತಪ್ಪಿಸಿಕೊಂಡವರ ನಡುವೆ ಒಲಂಪಿಕ್ಸ್ ಸ್ಪರ್ಧೆ ಏರ್ಪಡಿಸಿದರೆ ನನಗೆ ಖಚಿತವಾಗಿ ಚಿನ್ನದ ಪದಕ ಬರುತ್ತಿತ್ತು ಎಂದು ಹೇಳಿದ್ದರು.

la-me-fidel-castro-snapಕೊನೆಯವರೆಗೂ ಕ್ಯಾಸ್ಟ್ರೋ ಕಮ್ಯುನಿಸ್ಟ್ ಯೋಧನಾಗಿಯೇ ಹೋರಾಡಿ, 90 ನೇ ವರ್ಷದಲ್ಲಿ ಕೊನೆಯುಸಿರೆಳೆದಿದ್ದಾರೆ. ಕ್ಯಾಸ್ಟ್ರೋನನ್ನು ಕೊಲ್ಲಲು 638 ಬಾರಿ ಅಮೆರಿಕದ ಸಿಐಎ ಸಂಚು ರೂಪಿಸಿತ್ತು ಎಂದು ಕ್ಯಾಸ್ಟ್ರೋ ಬೆನ್ನಿಗೇ ಇದ್ದು ಹಲವು ಬಾರಿ ಹತ್ಯಾಯತ್ನಗಳಿಂದ ಆತನನ್ನು ರಕ್ಷಿಸಿದ ನಿವೃತ್ತ ಕ್ಯೂಬಾದ ಇಂಟೆಲಿಜೆನ್ಸ್ ಅಧಿಕಾರಿ ಫಾಬಿಯನ್ ಎಸ್ಕಲಾಂಟೇ ಹೇಳಿದ್ದಾರೆ.

ಕ್ಯಾಸ್ಟ್ರೊ ಮಾಜಿ ಪತ್ನಿ ಮಾರಿಟಾ ಲಾರೆಂಜ್ ಮೂಲಕ ವಿಷದ ಗುಳಿಗೆ ನೀಡಿ ಕೊಲ್ಲಲು ಸಿಐಎ ಪ್ರಯತ್ನಿಸಿದ್ದು ಆಗ ವಿಶ್ವದಲ್ಲೇ ಚರ್ಚೆಯ ವಿಷಯವಾಗಿತ್ತು. ತಾನು ಗರ್ಭವತಿಯಾಗುವವರೆಗೂ ಕ್ಯಾಸ್ಟ್ರೊ ಜೊತೆಗಿದ್ದ ಲಾರೆಂಜ್, ಅದೊಂದು ದಿನ ಇದ್ದಕ್ಕಿದ್ದಂತೆ ಖಾಯಿಲೆ ಬಿದ್ದಳು. ಚಿಕಿತ್ಸೆಗೆ ಆಕೆ ಅಮೆರಿಕಕ್ಕೆ ತೆರಳಿದಳು. ಅಲ್ಲಿ ಅಮೆರಿಕದ ಸಿಐಎ ಅಧಿಕಾರಿಗಳು ಆಕೆಯನ್ನು ಭೇಟಿಯಾಗಿ, ಲಾರೆಂಜ್ ಳಿಗೆ ತಡವಾಗಿ ಅಬಾರ್ಷನ್ ಆಗುವಂತೆ ಮಾಡಿ ಕೊಲ್ಲಲು ಕ್ಯಾಸ್ಟ್ರೋ ಸಂಚು ರೂಪಿಸಿದ್ದಾನೆ ಎಂದು ಆಕೆ ನಂಬುವಂತೆ ಮಾಡಿದರು. ಇದನ್ನು ನಂಬಿದ ಆಕೆ ಸಿಐಎ ಹೇಳಿದಂತೆ ಕ್ಯಾಸ್ಟ್ರೋ ತಿನ್ನುವ ಊಟದಲ್ಲಿ ವಿಷದ ಗುಳಿಗೆ ಬೆರೆಸಿ ಕೊಲ್ಲಲು ಒಪ್ಪಿಕೊಂಡಳು. ವಿಷದ ಗುಳಿಗೆಯನ್ನು ಪಡೆದ ಆಕೆ ಕ್ಯೂಬಾಕ್ಕೆ ವಾಪಸಾದಳು.

ಅಮೆರಿಕದಲ್ಲಿ ಲಾರೆಂಜ್‌ಳನ್ನು ಸಿಐಎ ಅಧಿಕಾರಿಗಳು ಭೇಟಿಯಾದ ವಿಷಯ ತನ್ನ ಗೂಡಚಾರರಿಂದ ತಿಳಿದುಕೊಂಡ ಕ್ಯಾಸ್ಟ್ರೋ, ಎಚ್ಚರಿಕೆಯಿಂದ ಲಾರೆಂಜ್‌ಳ ನಡುವಳಿಕೆಯನ್ನು ಗಮನಿಸುತ್ತಾ ಬಂದರು. ಆಕೆ ತನ್ನ ಕೋಲ್ಡ್ ಕ್ರೀಮ್ ಡಬ್ಬಿಯಲ್ಲಿ‌ ಬಚ್ಚಿಟ್ಟ ವಿಷದ ಗುಳಿಗೆಯನ್ನು ಕ್ಯಾಸ್ಟ್ರೋ ಪತ್ತೆ ಹಚ್ಚಿದರು. ಆಗ ಆಕೆಯ ಬಳಿಗೆ ಹೋಗಿ ತನ್ನ ಪಿಸ್ತೂಲ್ ತೆಗೆದು ಆಕೆಗೆ ನೀಡಿ ತನ್ನನ್ನು ಕೊಲ್ಲಬೇಕೆಂದರೆ ನೇರವಾಗಿ ಕೊಲ್ಲು ಎಂದರಂತೆ. ಕಣ್ಣು ಮುಚ್ಚಿ ಸಿಗರೇಟ್ ಹೊಗೆ ಹೊರಬಿಡುತ್ತಾ ಹಣೆಯ ಮೇಲೆ ಗುರಿಯಿಟ್ಟು ಹೊಡೆ ಎಂದು ಹೇಳಿದರಂತೆ. ಇದನ್ನು ಕೇಳಿದ ಲಾರೆಂಜ್ ನಡುಗುತ್ತಾ ಕ್ಯಾಸ್ಟ್ರೋನನ್ನು ತಬ್ಬಿ ತಪ್ಪಾಯಿತು ಕ್ಷಮಿಸಿಬಿಡಿ ಎಂದಳಂತೆ. ಹೀಗೆ ಸಿಐಎ ಮಾಡಿದ ವಿವಿಧ ರೀತಿಯ ಹತ್ಯಾ ಪ್ರಯತ್ನಗಳಲ್ಲಿ ಯಾವುದೂ ಕೈಗೂಡಲಿಲ್ಲ.