ವಯಸ್ಸಾದರೂ ಮದುವೆಯಾಗಲಿಲ್ಲವೆಂದು ಮನನೊಂದು ಆತ್ಮಹತ್ಯೆ

ಬೆಂಗಳೂರು: ವಯಸ್ಸು 38 ಮೀರಿದರೂ ಮದುವೆಯಾಗಲಿಲ್ಲವೆಂದು ಮಾನಸಿಕ ಬೇಗುದಿಗೊಳಗಾದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಉದಯ ನಗರದ ವಿವೇಕಾನಂದ ಸ್ಟ್ರೀಟ್ ನ ಮಂಜುನಾಥ ರಾವ್ (38) ತನ್ನ ತಾಯಿಯೊಂದಿಗೆ ವಾಸವಿದ್ದರು. ಪಿಯುಸಿ ವರೆಗೂ ವ್ಯಾಸಂಗ ಮಾಡಿರುವ ಮಂಜುನಾಥ ರಾವ್ ಪ್ರಸ್ತುತ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಕಳೆದ ಕೆಲ ವರ್ಷಗಳಿಂದ ಮದುವೆಗಾಗಿ ಹಲವು ಸಂಬಂಧಗಳನ್ನು ನೋಡಿದರೂ ಯಾವುದೂ ಆಗಿ ಬರಲಿಲ್ಲ ಎನ್ನಲಾಗಿದೆ.

ವಯಸ್ಸಾಗುತ್ತಿದ್ದರೂ ಹೆಣ್ಣು ಸಿಗದಿದ್ದರಿಂದ ಮಾನಸಿಕವಾಗಿ ನೊಂದ ಮಂಜುನಾಥ್ ರಾವ್ ಗುರುವಾರ ತನ್ನ ತಾಯಿ ಗಾರ್ಮೆಂಟ್ಸ್ ಗೆ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಮನೆಯಲ್ಲಿನ ಫ್ಯಾನ್ ಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ತಾಯಿ ರಾತ್ರಿ 8 ಗಂಟೆ ಸಮಯದಲ್ಲಿ ಮನೆಗೆ ವಾಪಸಾದಾಗ ಮಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮಹದೇವಪುರ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಕಳುಹಿಸಿ ತನಿಖೆ ಕೈಗೊಂಡಿದ್ದಾರೆ.