ಇನ್ನು ಎಟಿಎಂ, ಪೇಟಿಎಂ ಬೇಕಿಲ್ಲ… ಆಧಾರ್ ಆಪ್ ಬಳಸಿದರೆ ಸೇವಾ ಶುಲ್ಕವೂ ಇಲ್ಲ

***

ಇನ್ನು ಮುಂದೆ ಎಟಿಎಂ, ಪೇಟಿಎಂ ಗಳ ಪ್ರಾಮುಖ್ಯತೆ ಕಡಿಮೆಯಾಗಲಿದೆ. ಹಣ ಪಾವತಿಗಳಿಗಾಗಿ ಬಳಸುವ ಇತರೆ ಖಾಸಗಿ ಆಪ್ ಗಳಿಗೂ ಕೇಂದ್ರ ಸರ್ಕಾರ ತರುತ್ತಿರುವ ಹೊಸ ಮೊಬೈಲ್ ಆಪ್ ಶಾಕ್ ನೀಡಲಿದೆ. ನಗದು ರಹಿತ ವ್ಯವಹಾರಗಳನ್ನು ಮತ್ತಷ್ಟು ಸುಲಭವಾಗುವಂತೆ ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯೊಂದಿಗೆ ಅಭಿವೃದ್ಧಿಗೊಳಿಸಿದ ‘ಆಧಾರ್ ಪೇಮೆಂಟ್ ಆಪ್’ ಇಂದು (ಡಿಸೆಂಬರ್ 25) ರಂದು ಆರಂಭಿಸಲಿದ್ದಾರೆ.

ನೋಟು ರದ್ದಾದ ನಂತರ ಡಿಜಿಟಲ್ ಪಾವತಿಗಳ ಕುರಿತು ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ಆಪ್ ಹೊರಬರುತ್ತಿರುವುದು ಪ್ರಾಮುಖ್ಯತೆ ಪಡೆದಿದೆ. ಆನ್ಲೈನ್ ಪಾವತಿಗಳಿಗಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ‘ಆಧಾರ್ ಪೇಮೆಂಟ್ ಆಪ್’ ಭಾನುವಾರ ಆರಂಭವಾಗುತ್ತಿದೆ.

ಇದರಿಂದ ಇನ್ನು ಮುಂದೆ ಡೆಬಿಟ್/ಕ್ರೆಡಿಟ್ ಕಾರ್ಡ್, ಪಾಯಿಂಟ್ ಆಫ್ ಸೇಲ್ಸ್ ಅವಶ್ಯಕತೆಗಳು ಗಣನೀಯವಾಗಿ ಕಡಿಮೆಯಾಗಲಿದೆ. ಒಮ್ಮೆ ಈ ಆಪ್ ಆರಂಭವಾದರೆ ಆನ್ಲೈನ್ ಪೇಮೆಂಟ್ ಶುಲ್ಕಗಳನ್ನು ವಸೂಲಿಮಾಡುವ ಮಾಸ್ಟರ್ ಕಾರ್ಡ್, ವೀಸಾ ಕಾರ್ಡ್ ನಂತಹ ಸಂಸ್ಥೆಗಳಿಗೆ ಬೇಡಿಕೆ ಇರುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಚಿಲ್ಲರೆ ವ್ಯಾಪಾರಿಗಳಿಗೂ ಕೂಡಾ ಈ ಆಪ್ ತುಂಬಾ ಸಹಕಾರಿಯಾಗಲಿದೆ. ಈ ಆಪ್ ಅನ್ನು ಆಂಡ್ರಾಯ್ಡ್ ಫೋನ್ ಗಳಲ್ಲಿ ಸುಲಭವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು.

ಐಡಿಎಫ್‌ಸಿ ಬ್ಯಾಂಕ್, ಯುಐಡಿಎಐ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾಗಳು ಈ ಆಪ್ ಅನ್ನು ಅಭಿವೃದ್ಧಿಗೊಳಿಸಿವೆ. ಈ ಆಪ್ ಅನ್ನು ಮೊದಲು ವ್ಯಾಪಾರಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಡೌನ್ ಲೋಡ್ ಮಾಡಿ ಇನ್ಸ್‌ಟಾಲ್ ಮಾಡಿಕೊಳ್ಳಬೇಕು, ನಂತರ ಇದನ್ನು ಬಯೋಮೆಟ್ರಿಕ್ ರೀಡರ್ ಉಪಕರಣಕ್ಕೆ ಸಂಪರ್ಕ ಕಲ್ಪಿಸಬೇಕು. ನಂತರ ಬೆರಳಚ್ಚನ್ನು ಬಯೋಮೆಟ್ರಿಕ್ ರೀಡರ್ ಗೆ ನೀಡಿ ಆಧಾರ್ ಸಂಖ್ಯೆ ಎಂಟರ್ ಮಾಡಿ ಬ್ಯಾಂಕ್ ಅಕೌಂಟ್ ವಿವರಗಳನ್ನು ದಾಖಲಿಸಿದ ನಂತರ ಸ್ಕ್ಯಾನಿಂಗ್ ಗೆ ಮನವಿ ಮಾಡುತ್ತದೆ. ಆ ನಂತರ ಗ್ರಾಹಕ ತನ್ನ ಬೆರಳನ್ನು ಬಯೋಮೆಟ್ರಿಕ್ ರೀಡರ್ ಮೇಲಿಟ್ಟರೆ ಸಾಕು ಪಾವತಿ ಪೂರ್ಣಗೊಳ್ಳುತ್ತದೆ. ಈಗಾಗಲೇ ಈ ಆಪ್ ಗೆ ಬೇಕಾದ ಬಯೋಮೆಟ್ರಿಕ್ ರೀಡರ್ ಗಳಯ ಮಾರುಕಟ್ಟೆಯಲ್ಲಿವೆ. ಇವುಗಳ ಬೆಲೆ ರೂ.2000.