ಮುಂಬೈ ಸರಣಿ ಸ್ಪೋಟ ಪ್ರಕರಣ: ಇಬ್ಬರಿಗೆ ಗಲ್ಲು, ಇಬ್ಬರಿಗೆ ಜೀವಾವಧಿ ಶಿಕ್ಷೆ |News Mirchi

ಮುಂಬೈ ಸರಣಿ ಸ್ಪೋಟ ಪ್ರಕರಣ: ಇಬ್ಬರಿಗೆ ಗಲ್ಲು, ಇಬ್ಬರಿಗೆ ಜೀವಾವಧಿ ಶಿಕ್ಷೆ

ಮುಂಬೈ: 1993 ರ ಮುಂಬೈ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಟಾಡಾ ನ್ಯಾಯಾಲಯ ದೋಷಿಗಳಿಗೆ ಇಂದು ಶಿಕ್ಷೆ ಖಾಯಂಗೊಳಿಸಿದೆ. ಜೂನ್ ನಲ್ಲಿ ಎರಡನೇ ಹಂತದ ವಿಚಾರಣೆ ನಡೆಸಿದ ನ್ಯಾಯಾಲಯ, ಅಬೂಸಲೇಂ, ಮುಸ್ತಫಾ ದೋಸಾ, ಕರೀಮುಲ್ಲಾ ಖಾನ್, ಫಿರೋಜ್ ಅಬ್ದುಲ್ ರಷೀದ್ ಖಾನ್, ರಿಯಾಜ್ ಸಿದ್ದಿಖೀ, ತಾಹಿರ್ ಮರ್ಚಂಟ್ ಗಳನ್ನು ತಪ್ಪಿತಸ್ಥರೆಂದು ತೀರ್ಪು ನೀಡಿತ್ತು. ಇವರಲ್ಲಿ ಮುಸ್ತಫಾ ದೋಸಾ ಹೃದಯಾಘಾತದಿಂದ ಸಾವನ್ನಪ್ಪಿದ್ದನು. ಹೀಗಾಗಿ ಉಳಿದ ಐವರಿಗೆ ಕೋರ್ಟ್ ಇಂದು ಶಿಕ್ಷೆ ಪ್ರಕಟಿಸಿದೆ. ಇವರಲ್ಲಿ ತಾಹಿರ್ ಮರ್ಚಂಟ್ ಮತ್ತು ಫಿರೋಜ್ ಖಾನ್ ಗೆ ಮರಣದಂಡನೆ ವಿಧಿಸಲಾಗಿದ್ದು, ಅಬೂಸಲೇಂ ಮತ್ತು ಕರೀಮುಲ್ಲಾ ಖಾನ್ ಗೆ ಜೀವಾವಧಿ ಶಿಕ್ಷೆ ಜೊತೆಗೆ ರೂ. 2 ಲಕ್ಷ ದಂಡ ವಿಧಿಸಿದೆ. ಮತ್ತೊಬ್ಬ ಅಪರಾಧಿ ರಿಯಾಜ್ ಸಿದ್ದಿಕಿಗೆ 10 ವರ್ಷಗಳ ಜೈಲು ಶಿಕ್ಷೆಯಾಗಿದೆ.

ಭೂಗತ ಪಾತಕಿ ಅಬು ಸಲೇಂ ನನ್ನು ಪೋರ್ಚುಗಲ್ ನಿಂದ ಭಾರತ ವಶಕ್ಕೆ ಪಡೆದಿತ್ತು. ಹೀಗಾಗಿ ಅಲ್ಲಿನ ಕಾನೂನುಗಳ ಪ್ರಕಾರ ಮರಣದಂಡನೆ ಇಲ್ಲದಿರುವುದರಿಂದ ಮಾಡಿಕೊಂಡ ಒಪ್ಪಂದದಂತೆ ಇಲ್ಲಿ ಸಲೇಂ ಗೆ ಗಲ್ಲು ಶಿಕ್ಷೆ ವಿಧಿಸುವ ಅವಕಾಶವಿಲ್ಲದಂತಾಗಿದೆ.

1993 ರ ಮುಂಬೈ ಬಾಂಬ್ ಸ್ಪೋಟದ ಎರಡನೇ ಹಂತದ ವಿಚಾರಣೆ ನಡೆಸಿದ್ದ ಕೋರ್ಟ್ ಜೂನ್ 16 ರಂದು ತೀರ್ಪು ಪ್ರಕಟಿಸಿತ್ತು. ಪ್ರಮುಖ ಸೂತ್ರಧಾರ ಮುಸ್ತಫಾ ದೋಸಾ, ಗ್ಯಾಂಗ್’ಸ್ಟರ್ ಅಬೂಸಲೇಂ ಸೇರಿದಂತೆ ಆರು ಜನರನ್ನು ತಪ್ಪಿತಸ್ಥರೆಂದು ತೀರ್ಮಾನಿಸಿತ್ತು. ಸೂಕ್ತ ಸಾಕ್ಷಿಗಳಿಲ್ಲವೆಂದು ಮತ್ತೊಬ್ಬ ಆರೋಪಿ ಅಬ್ದುಲ್ ಖಯ್ಯೂಮ್ ನನ್ನು ದೋಷಮುಕ್ತಗೊಳಿಸಿತ್ತು. ಮತ್ತೊಬ್ಬ ಆರೋಪಿ ಮುಸ್ತಫಾ ದೋಸಾ ತೀರ್ಪು ಹೊರಬಿದ್ದ ಕೆಲವೇ ದಿನಗಳಲ್ಲಿ ಅಂದರೆ ಜೂನ್ 28 ರಂದು ಹೃದಯಾಘಾತದಿಂದ ಸತ್ತಿದ್ದ.

1993 ಮಾರ್ಚ್ 12 ರಂದು ಮುಂಬೈನಲ್ಲಿ ಎರಡು ಗಂಟೆಗಳ ಅವಧಿಯಲ್ಲಿ ಉಗ್ರರು ಸರಣಿಯಾಗಿ 12 ಕಡೆ ಬಾಂಬ್ ಸ್ಪೋಟಗಳು ನಡೆಸಿದ್ದರು. ಈ ಘಟನೆಯಲ್ಲಿ 257 ಜನ ಸಾವನ್ನಪ್ಪಿದ್ದು, 713 ಜನ ಗಂಭೀರವಾಗಿ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಸಿಬಿಐ ತನಿಖೆ ಆರಂಭಿಸಿತ್ತು. ಬಾಬ್ರಿ ಮಸೀದಿ ನೆಲಸಮಕ್ಕೆ ಪ್ರತೀಕಾರವಾಗಿ ಭೂಗತಪಾತಕಿ ದಾವೂದ್ ಇಬ್ರಾಹಿಂ, ಟೈಗರ್ ಮೆಮನ್, ಮಹ್ಮದ್ ದೋಸಾ, ಮುಸ್ತಫಾ ದೋಸಾ ಸಂಚು ರೂಪಿಸಿದ್ದರು ಎಂದು ಸಿಬಿಐ ವಿಚಾರಣೆಯಲ್ಲಿ ತಿಳಿದುಬಂದಿತ್ತು. ಈ ಪ್ರಕರಣದಲ್ಲಿ ಮುಂಬೈನ ವಿಶೇಷ ಟಾಟಾ ನ್ಯಾಯಾಲಯ 2007 ರಲ್ಲಿ ವಿಚಾರಣೆ ಮುಗಿಸಿತ್ತು. ಅದರಲ್ಲಿ 100 ಜನರನ್ನು ದೋಷಿಗಳಾಗಿ ತೀರ್ಮಾನಿಸಿತು. ಇವರಲ್ಲಿ ಒಬ್ಬನಾದ ಯಾಕೂಬ್ ಮೆಮನ್ ಗೆ 2013 ರಲ್ಲಿ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. 2015 ರಲ್ಲಿ ಈ ಶಿಕ್ಷೆಯನ್ನು ಜಾರಿ ಮಾಡಲಾಗಿತ್ತು.

ಆದರೆ ಕೇಸು ವಿಚಾರಣೆ ಮುಗಿಯುವ ಹಂತದಲ್ಲಿ ಮುಂಬೈ ಸ್ಪೋಟಗಳಲ್ಲಿ ಸಂಬಂಧವಿರುವುದಾಗಿ ಮುಸ್ತಫಾ ದೋಸಾ, ಅಬುಸಲೇಂ ಸೇರಿದಂತೆ ಮತ್ತೆ ಏಳು ಜನರನ್ನು ಬಂಧಿಸಲಾಯಿತು. ಹೀಗಾಗಿ ಇವರ ವಿಚಾರಣೆಯನ್ನು ಪ್ರಮುಖ ವಿಚಾರಣೆಯಿಂದ ಪ್ರತ್ಯೇಕಗೊಳಿಸಿ ಎರಡು ಹಂತಗಳ ವಿಚಾರಣೆಯನ್ನು ನಡೆಸಿತ್ತು ಟಾಡಾ ನ್ಯಾಯಾಲಯ. ಇವರಲ್ಲಿ ಆರು ಜನರನ್ನು ತಪ್ಪಿತಸ್ಥರೆಂದು ತೀರ್ಮಾನಿಸಿ ಇಂದು ಶಿಕ್ಷೆ ಪ್ರಕಟಿಸಲಾಗಿದೆ.

ಭಾರತಕ್ಕೆ ಆರ್.ಡಿ.ಎಕ್ಸ್ ತರುವಲ್ಲಿ ಮುಸ್ತಫಾ ದೋಸಾ ಪ್ರಮುಖ ಪಾತ್ರ ವಹಿಸಿದ್ದು. ಇದರೊಂದಿಗೆ ಕೆಲ ಯುವಕರನ್ನು ಪಾಕಿಸ್ತಾನಕ್ಕೆ ಕಳುಹಿಸಿ ಶಸ್ತ್ರಾಸ್ತ್ರ ತರಬೇತಿ ಕೊಡಿಸಿದ್ದ.

ಅಬುಸಲೇಂ ಗುಜರಾತ್ ನಿಂದ ಮುಂಬೈಗೆ ಶಸ್ತ್ರಾಸ್ತ್ರಗಳನ್ನು ಸಾಗಿಸಿದ್ದ. ಈ ಪ್ರಕರಣದಲ್ಲಿ ಅಪರಾಧಿಯಾಗಿ ಶಿಕ್ಷೆ ಪೂರ್ಣಗೊಳಿಸಿದ ಬಾಲಿವುಡ್ ನಟ ಸಂಜಯ್ ದತ್ ಗೆ ಕೂಡಾ 1993 ಜನವರಿ 16 ರಂದು ಸಲೇಂ ಎಕೆ 56 ರೈಫಲ್ ಗಳ ಜೊತೆ 250 ಸುತ್ತಿನ ಬುಲೆಟ್ ಗಳು, ಗ್ರೆನೇಡ್ ಗಳನ್ನೂ ನೀಡಿದ್ದಿ. ಪುನಃ ಜನವರಿ 18 ರಂದು ಸಂಜಯ್ ದತ್ ಮನೆಗೆ ಬಂದ ಅಬುಸಲೇಂ ಇವುಗಳನ್ನು ತೆಗೆದುಕೊಂಡು ಹೋಗಿದ್ದ.

ತಾಹಿರ್ ಮರ್ಚಂಟ್ ಭಯೋತ್ಪಾದನೆ ತರಬೇತಿಗೆ ಯುವಕರನ್ನು ಪತ್ತೆಹಚ್ಚಿ ಅವರನ್ನು ಪ್ರಚೋದಿಸುತ್ತಿದ್ದ. ಭಾರತದಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ತಯಾರಿಕಾ ಕೇಂದ್ರವನ್ನು ಸ್ಥಾಪಿಸಲು ಹಣ ಸಂಗ್ರಿಹಿಸಿದ್ದ.

ಫಿರೋಜ್ ಅಬ್ದುಲ್ ಖಾನ್ ಶಸ್ತ್ರಾಸ್ತ್ರಗಳನನ್ನು ತರಲು ಕಸ್ಟಮ್ಸ್ ಅಧಿಕಾರಿಗಳು, ಏಜೆಂಟ್ ಗಳೊಂದಿಗೆ ಸಂಪರ್ಕ ಸಾಧಿಸಿ, ಅವುಗಳನ್ನು ಎಚ್ಚರಿಕೆಯಿಂದ ಗುರಿ ತಲುಪಿಸಿದ್ದ. ಇದರೊಂದಿಗೆ ಸ್ಪೋಟದ ಸಂಚಿನಲ್ಲಿ ಪಾಲ್ಗೊಂಡಿದ್ದ. ಕಳೆದ ವರ್ಷ ಮೇ ಅಂತ್ಯದಲ್ಲಿ ವಿಚಾರಣೆ ವೇಳೆ ಅಪ್ರೂವರ್ ಆಗಲು ಸಿದ್ಧನಾಗಿದ್ದ.

ರಿಯಾಜ್ ಸಿದ್ಧಿಕಿ ಶಸ್ತ್ರಾಸ್ತ್ರ ಸಾಗಿಸಲು ಅಬು ಸಲೇಂ ಗೆ ವಾಹನಗಳನ್ನು ಒದಗಿಸುವುದರೊಂದಿಗೆ ಹಲವು ಸಂದರ್ಭಗಳಲ್ಲಿ ಅವರಿಗೆ ಸಹಕರಿಸಿದ್ದ.

ಕರೀಮುಲ್ಲಾ ಖಾನ್ ಮಹಾರಾಷ್ಟ್ರದ ರಾಯಘಢ ಜಿಲ್ಲೆಯಲ್ಲಿ ಅಡಗಿಸಿದ್ದ ಆಯುಧಗಳನ್ನು, ಡಿಟೋನೇಟರ್ ಗಳು, ಗ್ರೆನೇಡ್ ಗಳನ್ನು ತಲುಪಿಸಬೇಕಾದ ವ್ಯಕ್ತಿಗಳಿಗೆ ತಲುಪಿಸಲು ಪ್ರಮುಖ ಪಾತ್ರವಹಿಸಿದ್ದ. ಈತ ದುಬೈ ಮೂಲಕ ಪಾಕಿಸ್ತಾನಕ್ಕೆ ತೆರಳಿ ಶಸ್ತ್ರಾಸ್ತ್ರ ತರಬೇತಿ ಪಡೆದಿದ್ದ.

ನಿಮ್ಮ ಮೊಬೈಲ್ ನಲ್ಲಿ ನ್ಯೂಸ್ ಅಪ್ಡೇಟ್ಸ್ ಗಾಗಿ “ADD ME” ಎಂದು ನಿಮ್ಮ ಹೆಸರಿನ ಜೊತೆ 8550851559 ಗೆ ವಾಟ್ಸಾಪ್ ಮಾಡಿ

Loading...
loading...
error: Content is protected !!