ಮತಯಂತ್ರ ಗೊಂದಲ, ಅಧಿಕಾರಿಗಳ ವರ್ಗಾವಣೆ

ವಿದ್ಯುನ್ಮಾನ ಮತ ಯಂತ್ರಗಳನ್ನು (ಗಳನ್ನು) ಪ್ರದರ್ಶಿಸುವ ವೇಳೆ ಉಂಟಾಗಿದ್ದ ಗೊಂದಲಕ್ಕೆ ಮಧ್ಯಪ್ರದೇಶದ ಮೂವರು ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಕೇಂದ್ರ ಚುನಾವಣಾ ಆಯೋಗದ ಆದೇಶದಂತೆ ಭಿಂದ್ ಜಿಲ್ಲಾಧಿಕಾರಿ, ಎಸ್‌ಪಿ ಮತ್ತು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ವರ್ಗಾವಣೆಗೊಂಡಿದ್ದಾರೆ. ಇತರೆ 16 ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಉಪಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಮಾಧ್ಯಮಗಳೆದರು ಮತಯಂತ್ರಗಳನ್ನು ಪ್ರದರ್ಶಿಸಲಾಗಿತ್ತು. ಯಾವ ಬಟನ್ ಒತ್ತಿದರೂ ಬಿಜೆಪಿಗೆ ಮತ ಹೋಗುತ್ತಿದ್ದ ಕಾರಣ ಪ್ರತಿಪಕ್ಷಗಳು ಮತಯಂತ್ರಗಳ ವಿಶ್ವಾಸಾರ್ಹತೆ ಕುರಿತು ಅನುಮಾನ ವ್ಯಕ್ತಪಡಿಸಿದವು.

ಮಧ್ಯಪ್ರದೇಶದಲ್ಲಿ ಏಪ್ರಿಲ್ 9 ರಂದು ಎರಡು ವಿಧಾನಸಭಾ ಕ್ಷೆತ್ರಗಳಿಗೆ ಉಪಚುನಾವಣೆ ನಡೆಯಬೇಕಿದೆ. ಮತಯಂತ್ರಗಳ ಬಗ್ಗೆ ಅನುಮಾನಗಳು ಹುಟ್ಟಿಕೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಪೇಪರ್ ಬ್ಯಾಲೆಟ್ ಮತದಾನಕ್ಕೆ ಒತ್ತಾಯಿಸುತ್ತಿವೆ. ಅಧಿಕಾರಿಗಳ ವರ್ಗಾವಣೆ ಕ್ರಮಕ್ಕೆ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮತಯಂತ್ರಗಳ ಹಗರಣಕ್ಕೂ ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಗೆ ಏನು ಸಂಬಂಧ, ಅವರೇನು ಮತಯಂತ್ರಗಳ ಸಾಫ್ಟ್‌ವೇರ್ ಬದಲಿಸಿದ್ದರಾ ಎಂದು ಅವರು ಪ್ರಶ್ನಿಸಿದ್ದಾರೆ.