ಗಾಯಕ್ವಾಡ್ ಮೇಲಿನ ನಿಷೇಧ ತೆರವುಗೊಳಿಸಿದ ಏರ್ ಇಂಡಿಯಾ

ನವದೆಹಲಿ: ಹಲವು ನಾಟಕೀಯ ಪರಿಣಾಮಗಳ ನಂತರ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ಮೇಲಿನ ನಿಷೇಧವನ್ನು ಏರ್ ಇಂಡಿಯಾ ಹಿಂತೆಗೆದುಕೊಂಡಿದೆ. ತಮ್ಮ ಸಿಬ್ಬಂದಿ ಮೇಲೆ ಗಾಯಕ್ವಾಡ್ ನಡೆಸಿದ ಹಲ್ಲೆಯ ಹಿನ್ನೆಲೆಯಲ್ಲಿ ಏರ್ ಇಂಡಿಯಾ ತಮ್ಮ ವಿಮಾನಯಾನದ ಸೇವೆ ಬಳಸದಂತೆ ಗಾಯಕ್ವಾಡ್ ಗೆ ನಿರ್ಬಂಧ ವಿಧಿಸಿತ್ತು. ಆದರೆ ಈಗ ಕೇಂದ್ರ ಸರ್ಕಾರ ಮಧ್ಯಪ್ರವೇಶದಿಂದ ಗಾಯಕ್ವಾಡ್ ಮೇಲಿನ ನಿಷೇಧವನ್ನು ತೆರವುಗೊಳಿಸಲು ನಾಗರೀಕ ವಿಮಾನಯಾನ ಇಲಾಖೆ ಏರ್ ಇಂಡಿಯಾಗೆ ಪತ್ರ ಬರೆದಿದೆ. ಏರ್ ಇಂಡಿಯಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಕ್ಕೆ ಪಶ್ಚಾತ್ತಾಪ ವ್ಯಕ್ತಪಡಿಸಿ ನಿನ್ನೆ ನಾಗರಿಕ ವಿಮಾನಯಾನ ಇಲಾಖೆಗೆ ಗಾಯಕ್ವಾಡ್ ಪತ್ರ ಬರೆದಿದ್ದರು.

ಏರ್ ಇಂಡಿಯಾ ಸಂಸ್ಥೆಯ ಮ್ಯಾನೇಜರ್ ಮೇಲೆ 25 ಬಾರಿ (ಗಾಯಕ್ವಾಡ್ ಅವರೇ ಹೇಳಿಕೊಂಡಂತೆ) ಚಪ್ಪಲಿಯಲ್ಲಿ ಹೊಡೆದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಗಾಯಕ್ವಾಡ್ ನನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಿದ್ದರು. ಏರ್ ಇಂಡಿಯಾ ನಡೆಯನ್ನು ಇತರೆ ವಿಮಾನಯಾನ ಸಂಸ್ಥೆಗಳು ಅನುಸರಿಸಿದ್ದವು.