ದೆಹಲಿಯ ಶಾಲೆಗಳಿಗೆ ‘ಮಾಲಿನ್ಯ’ ರಜೆ

ನವದೆಹಲಿ: ವಾಯು ಮಾಲಿನ್ಯದಿಂದ ಕಂಗಾಲಾಗಿರುವ ದೇಶದ ರಾಜಧಾನಿ ದೆಹಲಿಯಲ್ಲಿ ಮತ್ತೆ ಮೂರು ದಿನಗಳ ಕಾಲ ಶಾಲೆಗಳನ್ನು ಮುಚ್ಚಬೇಕೆಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ವಾಯುಮಾಲಿನ್ಯ ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ತಮ್ಮ ನಿವಾಸದಲ್ಲಿ ಸಚಿವರೊಂದಿಗೆ ಸಭೆ ಸೇರಿದ್ದರು. ಈ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು.

ಕಟ್ಟಡ ನಿರ್ಮಾಣ, ಕಟ್ಟಡ ನೆಲಸಮ ಮಾಡುವುದನ್ನು ಐದು ದಿನಗಳ ಕಾಲ ನಿಷೇಧಿಸಿದ್ದಾರೆ. ರಸ್ತೆಗಳನ್ನು ಆಗಾಗ ನೀರಿನಿಂದ ತಂಪು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಈ ಹಿಂದೆ ಜಾರಿ ಮಾಡಿದ್ದ ವಾಹನಗಳ ಸರಿ ಬೆಸ ವಿಧಾನವನ್ನು ಮತ್ತೆ ಜಾರಿಗೊಳಿಸಲು ತೀರ್ಮಾನಿಸಿದರು. ಕೆಲ ದಿನಗಳ ಕಾಲ ನಗರದಲ್ಲಿ ಎಲ್ಲಿಯೂ ಯಾವುದೇ ವಸ್ತುಗಳನ್ನು ಸುಡಬಾರದೆಂದು, ಹಾಗೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ದೆಹಲಿಯಲ್ಲಿ ಹಿಂದೆಂದೂ ಕಾಣದ ಮಟ್ಟಿಗೆ ವಾಯುಮಾಲಿನ್ಯ ಹೆಚ್ಚಾಗಿದ್ದು, ಕೂಡಲೇ ಈ ಕುರಿತು ಕ್ರಮ ಕೈಗೊಳ್ಳುವಂತೆ ಹಸಿರು ನ್ಯಾಯಪೀಠ ದೆಹಲಿ ಸರ್ಕಾರಕ್ಕೆ ಆದೇಶಿಸಿತ್ತು.