ಪ್ರತಿದಿನ ಸಾವಿರ ಮಕ್ಕಳು ಇದರಿಂದಾಗಿ ಸಾಯುತ್ತಿದ್ದಾರೆ: ಅಕ್ಷಯ್ – News Mirchi

ಪ್ರತಿದಿನ ಸಾವಿರ ಮಕ್ಕಳು ಇದರಿಂದಾಗಿ ಸಾಯುತ್ತಿದ್ದಾರೆ: ಅಕ್ಷಯ್

ಭೂಕಂಪಗಳು ಸಂಭವಿಸಿದಾಗಲೋ, ಪ್ರವಾಹ ಜನರ ಜೀವನ ಅಸ್ತವ್ಯಸ್ತಗೊಳಿಸಿದಾಗಲೋ, ಮತ್ತೊಂದೋ ಪ್ರಕೃತಿ ವಿಕೋಪ ಸಂಭವಿಸಿದಾಗ ಮಾನವೀಯತೆ ಮೆರೆಯುವ ಸೆಲೆಬ್ರಿಟಿಗಳು ಹೆಚ್ಚು. ಮಾಡುವ ಸಣ್ಣ ಸಹಾಯಕ್ಕೂ ಮಾಧ್ಯಮಗಳ ಮೂಲಕ ಬೆಟ್ಟದಷ್ಟು ಪ್ರಚಾರ ಪಡೆಯುತ್ತಾರೆ. ಆದರೆ ಇವರೆಲ್ಲರಿಗೂ ವಿಭಿನ್ನ ವ್ಯಕ್ತಿತ್ವ ಹೊಂದಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್, ಸದಾ ತಮ್ಮ ಮಾನವೀಯತೆಯನ್ನು ಮೆರೆಯುತ್ತಿರುತ್ತಾರೆ. ಸಾಮಾಜಿಕ ಸಮಸ್ಯೆಗಳಿಗೆ ಆಗಾಗ ಸ್ಪಂದಿಸಿ ತಮ್ಮ ಕೈಲಾದ ನೆರವು ನೀಡುತ್ತಿರುತ್ತಾರೆ. ಅದರ ಜೊತೆಗೇ ಜನರಲ್ಲೂ ಸಮಸ್ಯೆಗಳ ಕುರಿತು ಅರಿವು ಮೂಡಿಸುವ ಕಾರ್ಯವನ್ನೂ ಮಾಡುತ್ತಿರುತ್ತಾರೆ.

ಇತ್ತೀಚೆಗೆ ಹುತಾತ್ಮರಾದ ಸೈನಿಕರಿಗೆ ಕೂಡಲೇ ಸ್ಪಂದಿಸಿದ ಅಕ್ಷಯ್ ಕುಮಾರ್, ಹುತಾತ್ಮ ಯೋಧರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದರು. ನೇರವಾಗಿ ಸೈನಿಕರ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗುವಂತೆ ಒಂದು ಲಿಂಕ್ ಅನ್ನು ಸಾಮಾಜಿಕ ತಾಣಗಳ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡರು. ಇದರಿಂದಾಗಿ ದೇಶದ ಪ್ರಜೆಗಳಿಂದಲೂ ಕೋಟ್ಯಂತರ ರೂಪಾಯಿ ನೆರವು ಹರಿದು ಬಂದಿತು.

ಇದೀಗ ಒಂದು ಹೊಸ ಕಾರ್ಯಕ್ರಮ ಟಾಯ್ಲೆಟ್ ವೀಡಿಯೋ ಮೂಲಕ ಅಕ್ಷಯ್ ಕುಮಾರ್ ನಮ್ಮ ಮುಂದೆ ಬರುತ್ತಿದ್ದಾರೆ. ಆರು ನಿಮಿಷಗಳ “ಸೋಚ್ ಔರ್ ಸಾಚ್” ಹೆಸರಿನ ವೀಡಿಯೋ ಮೂಲಕ ನಮ್ಮ ದೇಶದಲ್ಲಿ ಶೌಚಾಲಯಗಳ ಅಗತ್ಯತೆಯನ್ನು ತಿಳಿಸುತ್ತಾ ಜನರಲ್ಲಿ ಅರಿವು ಮೂಡಿಸುವ ಉದ್ದೇಶ ಹೊಂದಿದ್ದಾರೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಅಕ್ಷಯ್ ಕುಮಾರ್ ನಟನೆಯ “ಟಾಯ್ಲೆಟ್ – ಒಂದು ಪ್ರೇಮಕಥೆ” ಚಿತ್ರದ ಶೂಟಿಂಗ್ ವೇಳೆ ತಿಳಿದುಕೊಂಡ ವಿಷಯಗಳು ಅಕ್ಷಯ್ ರವರನ್ನು ಚಿಂತಿಸುವಂತೆ ಮಾಡಿದವು. ಅದಕ್ಕಾಗಿಯೇ ಅವರು ಬಹಿರಂಗ ಪ್ರದೇಶಗಳಲ್ಲಿ ಮಲವಿಸರ್ಜನೆ ಕುರಿತು ಅರಿವು ಮೂಡಿಸಲು, ನಮ್ಮ ದೇಶದಲ್ಲಿ ಶೌಚಾಲಯಗಳ ಕೊರತೆಯ ಬಗ್ಗೆ ಈ ವೀಡಿಯೋದಲ್ಲಿ ತೋರಿಸಿದ್ದಾರೆ.

ಗ್ರಾಮೀಣ ಪ್ರದೇಶದ ಮಹಿಳೆಯರ ಪರಿಸ್ಥಿತಿ ಕೆಟ್ಟದಾಗಿದೆ. ಅವರಿಗೆ ಶೌಚಾಲಯಗಳಿಲ್ಲದೆ ಪ್ರತಿ ದಿನ ಬೆಳಗ್ಗೆ ಅಥವಾ ರಾತ್ರಿ ವೇಳೆ ಮಲವಿಸರ್ಜನೆಗೆ ಬಯಲಿಗೆ ಹೋಗುತ್ತಾರೆ. ಭಾರತ ಅತ್ಯಂತ ಶಕ್ತಿಶಾಲಿಯಾಗಿ ಬೆಳೆಯುತ್ತಿದೆ. ಆದರೆ ಈಗಲೂ ಹಲವು ಸ್ತ್ರೀಯರು ಶೌಚಾಲಯಗಳಿಂದ ದೂರವಿದ್ದಾರೆ. ಬಯಲು ಪ್ರದೇಶಗಳಲ್ಲಿ ಮಲವಿಸರ್ಜನೆಗೆ ಹೋಗುವ ಹೆಂಗಸರು, ಮಕ್ಕಳು ಅಪಾಯಕಾರಿ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದರಿಂದಾಗಿ ಪ್ರತಿದಿನ ಸುಮಾರು 1,000 ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ನಿಮ್ಮ ಮನೆಯಲ್ಲಿ ಅಡುಗೆ ಕೋಣೆ ಇರಬೇಕು, ಮಲಗುವ ಕೋಣೆ ಇರಬೇಕು, ಆದರೆ ಶೌಚಾಲಯವೇಕೆ ಬೇಡ? ಆರೋಗ್ಯದಿಂದ ಇರಲು ಪ್ರತಿಯೊಬ್ಬರೂ ಸ್ವಚ್ಛತೆಯನ್ನು ಪಾಲಿಸಬೇಕು. ಎಲ್ಲರೂ ಸ್ವಚ್ಛವಾಗಿದ್ದರೇನೇ ಸ್ವಚ್ಛ ಭಾರತ ಕನಸು ನನಸಾಗುತ್ತದೆ ಎಂದು ಅಕ್ಷಯ್ ಹೇಳಿದ್ದಾರೆ.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!