ಹಳೇ ನೋಟು ರದ್ದು: ನೀವು ಹೀಗೆ ಮಾಡಿ

ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿ ರೂ.500 ಮತ್ತು 1000 ಮುಖ ಬೆಲೆಯ ನೋಟುಗಳನ್ನು ರದ್ದುಪಡಿಸುತ್ತಿರುವುದಾಗಿ ಪ್ರಕಟಿಸಿದರು. ಮಂಗಳವಾರ ಮಧ್ಯರಾತ್ರಿಯಿಂದ ಈ ನೋಟುಗಳು ಕೇವಲ ಕಾಗದಗಳು ಮಾತ್ರ ಎಂದು ಸ್ಪಷ್ಟಪಡಿಸಿದರು. ಈ ಹಿನ್ನೆಲೆಯಲ್ಲಿ ಈ ಕರೆನ್ಸಿ ನೋಟು ಹೊಂದಿರುವವರು ಆತಂಕ ಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ.

ಈ ನೋಟುಗಳನ್ನು ಹೊಂದಿರುವವರು ಏನು ಮಾಡಬೇಕು?

ಬುಧವಾರ (ನವೆಂಬರ್ 9)ರಂದು ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ

ಸದ್ಯ ನಿಮ್ಮ ಬಳಿ ಇರುವ ರೂ. 500 ಮತ್ತು ರೂ. 1000 ಮುಖಬೆಲೆಯ ನೋಟುಗಳನ್ನು ಡಿಸೆಂಬರ್ 30 2016 ರೊಳಗೆ ಬ್ಯಾಂಕು ಮತ್ತು ಅಂಚೆ ಕಛೇರಿಯಲ್ಲಿ ಡಿಪಾಸಿಟ್ ಮಾಡಬಹುದು. ಹೀಗೆ ಡಿಪಾಸಿಟ್ ಮಾಡುವ ಹಣದ ವಿಷಯದಲ್ಲಿ ಯಾವುದೇ ಮಿತಿ ಇರುವುದಿಲ್ಲ.

ಈ ತಿಂಗಳ 24 ವರೆಗೂ ಹೆಡ್ ಪೋಸ್ಟ್ ಆಫೀಸ್ ಅಥವಾ ಸಬ್ ಪೋಸ್ಟ್ ಆಫೀಸ್ ಗಳಲ್ಲಿ ಗುರುತಿನ ಚೀಟಿ ತೋರಿಸಿ ಹಳೆಯ ರೂ. 500 ಮತ್ತು ರೂ. 1000 ಮುಖಬೆಲೆಯ ನೋಟುಗಳ ಬದಲಾವಣೆ ಮಾಡಿಕೊಳ್ಳಬಹುದು. ಇಲ್ಲಿ ರೂ. 4,000 ಮಿತಿ ಇರುತ್ತದೆ.

ಕೆಲ ಕಾಲ ಬ್ಯಾಂಕ್ ನಿಂದ ವಿತ್ ಡ್ರಾ ಮಾಡುವ ಹಣಕ್ಕೆ ರೂ. 10 ಸಾವಿರ ಹಾಗೂ ವಾರಕ್ಕೆ ರೂ. 20 ಸಾವಿರದವರೆಗೆ ಮಿತಿ ಇರುತ್ತದೆ. ಇದನ್ನು ಮುಂದಿನ ದಿನಗಳಲ್ಲಿ ಹೆಚ್ಚು ಮಾಡಬಹುದು.

ಚೆಕ್, ಡಿಮ್ಯಾಂಡ್ ಡ್ರಾಫ್ಟ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮೂಲಕ ಮಾಡುವ ಪಾವತಿ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ವಿಷಯದಲ್ಲಿ ಯಾವುದೇ ಮಿತಿ ಇರುವುದಿಲ್ಲ.

ಇಂತಹ ಪ್ರದೇಶಗಳಲ್ಲಿ 72 ಗಂಟೆಯವರೆಗೆ ಹಳೆಯ ನೋಟು ಚಲಾವಣೆಯಲ್ಲಿರುತ್ತದೆ

ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಳೆಯ ನೋಟು ಚಲಾವಣೆಯಾಗುತ್ತವೆ

ರೈಲ್ವೇ ಟಿಕೆಟ್ ಬುಕಿಂಗ್ ಕೌಂಟರ್, ಸರ್ಕಾರಿ ಬಸ್ಸು ಕೌಂಟರ್, ವಿಮಾನ ಬುಕಿಂಗ್ ಕೌಂಟರ್, ಪೆಟ್ರೋಲ್ ಬಂಕ್ ಗಳಲ್ಲಿ 72 ಗಂಟೆಗಳ ವರೆಗೆ ಚಲಾವಣೆ ಆಗುತ್ತವೆ.