ಆ ಕಾರಣದಿಂದಲೇ ಅಡ್ವಾಣಿ ಆಯ್ಕೆಯಾಗಲಿಲ್ಲ, ರಜನಿ ಬರದಿದ್ದರೂ ನಮ್ಮ ತಂತ್ರಗಳು ನಮಗಿವೆ: ಅಮಿತ್ ಶಾ – News Mirchi

ಆ ಕಾರಣದಿಂದಲೇ ಅಡ್ವಾಣಿ ಆಯ್ಕೆಯಾಗಲಿಲ್ಲ, ರಜನಿ ಬರದಿದ್ದರೂ ನಮ್ಮ ತಂತ್ರಗಳು ನಮಗಿವೆ: ಅಮಿತ್ ಶಾ

ಚೆನ್ನೈ: ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಎಲ್.ಕೆ.ಅಡ್ವಾಣಿ ಅವರ ಬದಲಿಗೆ ರಾಮನಾಥ್ ಕೋವಿಂದ್ ಅವರ ಆಯ್ಕೆ ಹಿಂದಿನ ಕಾರಣವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಹಿರಂಗಪಡಿಸಿದ್ದಾರೆ. ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ದಲಿತ ಸಮುದಾಯದವರನ್ನು ಆಯ್ಕೆ ಮಾಡಬೇಕೆಂದು ತೀರ್ಮಾನಿಸಿದ್ದರಿಂದಾಗಿ, ರಾಮನಾಥ್ ಕೋವಿಂದ್ ಅವರನ್ನು ಎಲ್ಲಾ ರೀತಿಯಿಂದಲೂ ಸಮರ್ಥ ವ್ಯಕ್ತಿ ಎಂದು ಆಯ್ಕೆ ಮಾಡಲಾಯಿತು ಎಂದು ಮಂಗಳವಾರ ಚೆನ್ನೈನಲ್ಲಿ ಸ್ಥಳೀಯ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದರು.

ರಾಷ್ಟ್ರಪತಿ ಚುನಾವಣೆಯಲ್ಲಿ ಎನ್.ಡಿ.ಎ ಅಭ್ಯರ್ಥಿಯನ್ನು ಬೆಂಬಲಿಸುವ ಬದಲಿಗೆ ಸ್ಪರ್ಧೆಗೆ ಇಳಿದ ಪ್ರತಿಪಕ್ಷಗಳ ಮೇಲೆ ಅಮಿತ್ ಶಾ ಕಿಡಿ ಕಾರಿದರು. ತಾವು ದಲಿತರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದರೆ, ಕಾಂಗ್ರೆಸ್ ಪಕ್ಷ ಮೀರಾ ಕುಮಾರ್ ಅವರನ್ನು ಆಯ್ಕೆ ಮಾಡುವುದೇ ಎಂದು ಪ್ರಶ್ನಿಸಿದರು. ಮೊದಲು ಕಾಂಗ್ರೆಸ್ ಗೋಪಾಲಕೃಷ್ಣ ಗಾಂಧಿಯವರನ್ನು ಸ್ಪರ್ಧೆಗೆ ಇಳಿಸಲು ಭಾವಿಸಿತ್ತು. ಆದರೆ ಬಿಜೆಪಿ ಕೋವಿಂದ್ ಅವರನ್ನು ಆಯ್ಕೆ ಮಾಡುತ್ತಿದ್ದಂತೆ ನಮ್ಮನ್ನು ಕಾಪಿ ಮಾಡಿ ಮೀರಾ ಕುಮಾರ್ ಅವರನ್ನು ಆಯ್ಕೆ ಮಾಡಿದ್ದಾರೆ ಎಂದರು.

ತಮಿಳು ಚಿತ್ರ ನಟ ರಜನೀಕಾಂತ್ ತುಂಬಾ ಖ್ಯಾತಿ ಹೊಂದಿರುವ ವ್ಯಕ್ತಿ. ಆದರೆ ಅವರು ಬಿಜೆಪಿಯಲ್ಲಿ ಸೇರಲಿದ್ದಾರೆ ಎಂಬುದು ಸದ್ಯಕ್ಕೆ ಸುಮ್ಮನೆ ಪ್ರಚಾರದಲ್ಲಿದೆ ಎಂದಷ್ಟೇ ಹೇಳಿದರು. ರಾಜಕೀಯ ಪ್ರವೇಶದ ಬಗ್ಗೆ ಅವರು ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಬಿಜೆಪಿಗೆ ಬರಲು ಇಚ್ಛಿಸಿದರೆ, ಸ್ಥಳೀಯ ನಾಯಕರನ್ನು ಸಂಪರ್ಕಿಸಿ ಆ ಕುರಿತು ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದ ಅಮಿತ್ ಶಾ, ಒಂದು ವೇಳೆ ರಜನಿ ಬಿಜೆಪಿ ಸೇರದೇ ಇದ್ದರೂ ನಮ್ಮ ತಂತ್ರಗಳು ನಮಗೆ ಇರುತ್ತವೆ ಎಂದರು.

Loading...