ಅಮ್ಮನ ಉತ್ತರಾಧಿಕಾರಿ ಚಿಕ್ಕಮ್ಮನೇ!

ತಮಿಳುನಾಡು ಮುಖ್ಯಮಂತ್ರಿ ದಿವಂಗತ ಜಯಲಲಿತಾ ರವರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಗಳಿಗೆ, ಜಯಲಲಿತಾರವರ ಗೆಳತಿ ಶಶಿಕಲಾ ಹೆಸರು ಕೇಳಿ ಬರುತ್ತಿದೆ. ಈಗಾಗಲೇ ಸಿಎಂ ಒ ಪನ್ನೀರ್ ಸೆಲ್ವಂ ಸೇರಿದಂತೆ ಹಿರಿಯ ಮುಖಂಡರೆಲ್ಲಾ ಪಕ್ಷದ ನಾಯಕತ್ವ ವಹಿಸಿಕೊಳ್ಳುವಂತೆ ಶಶಿಕಲಾರವರಿಗೆ ಮನವಿ ಮಾಡಿದ್ದಾರಂತೆ.

ಇದೀಗ ಮತ್ತೊಬ್ಬ ಹಿರಿಯ ನಾಯಕರೊಬ್ಬರು ಅವರೊಂದಿಗೆ ದನಿಗೂಡಿಸಿದ್ದಾರೆ. ಅಣ್ಣಾಡಿಎಂಕೆ ಯಲ್ಲಿ ಪ್ರಬಲ ನಾಯಕ ಎನಿಸಿಕೊಂಡಿರುವ ಲೋಕಸಭಾ ಸ್ಪೀಕರ್ ಎಂ.ತಂಬಿದೊರೈ ಸಹಾ ಶಶಿಕಲಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಅವರು ಭಾನುವಾರ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

ಚಿಕ್ಕಮ್ಮ(ಶಶಿಕಲಾ) ಅಮ್ಮ(ಜಯಲಲಿತಾ)ನೊಂದಿಗೆ ಸೇರಿ 35 ವರ್ಷಗಳನ್ನು ಕಳೆದಿದ್ದಾರೆ. ತಮ್ಮ ಜೀವನದಲ್ಲಿ ಹಲವಾರು ತ್ಯಾಗ ಮಾಡಿದ್ದಾರೆ. ರಾಜಕೀಯ ದ್ವೇಷದಿಂದ ಆಕೆಯ ಮೇಲೆ ಕೆಲವು ನಕಲಿ ಕೇಸು ದಾಖಲಿಸಿದ್ದಾರೆ. ಹಲವು ಸಮಯಗಳಲ್ಲಿ ಜಯಲಲಿತಾರವರನ್ನು ಶಶಿಕಲಾ ಕಾಪಾಡಿದ್ದಾರೆ. ಪಕ್ಷ ಮುನ್ನಡೆಸಲು ಜಯಾಗೆ ಸಲಹೆ ನೀಡಿದ್ದಾರೆ ಎಂದು ತಂಬಿದುರೈ ಹೇಳಿದ್ದಾರೆ.

ಚಿಕ್ಕಮ್ಮ(ಶಶಿಕಲಾ) ಹೇಳಿದಂತೆ ಕೇಳಬೇಕು ಎಂದು ಜಯಲಲಿತಾ ರವರೇ ಹಲವು ಬಾರಿ ಹೇಳಿದ್ದರೆಂದು ತಂಬಿದುರೈ ಹೇಳಿದ್ದಾರೆ. ಶಶಿಕಲಾ ಜಯಲಲಿತಾ ರವರೊಂದಿಗೆ ಹಲವು ಕಾಲದಿಂದ ಇರುವುದರಿಂದ ಅವರನ್ನು ನಾವು ಚಿಕ್ಕಮ್ಮ ಎಂದು ಕರೆಯುತ್ತಿದ್ದೆವು. ಇದಕ್ಕೆ ಜಯಲಲಿತಾ ಎಂದಿಗೂ ಅಡ್ಡಿಪಡಿಸಿಲ್ಲ. ಜಯಾ ವಾರಸುದಾರರು ಚಿಕ್ಕಮ್ಮನೇ ಎನ್ನಲು ಇದಕ್ಕಿಂದ ಉತ್ತಮ ಉದಾಹರಣೆ ಬೇಕಿಲ್ಲ ಎಂದು ತಂಬಿದುರೈ ಹೇಳಿದ್ದಾರೆ.