ಅಂಡಮಾನ್ ನಿಕೋಬಾರ್ ಒಂದು ಸುಂದರ ಪ್ರಪಂಚ – News Mirchi

ಅಂಡಮಾನ್ ನಿಕೋಬಾರ್ ಒಂದು ಸುಂದರ ಪ್ರಪಂಚ

ಬಂಗಾಳಕೊಲ್ಲಿ ಸಮುದ್ರ ನೀರಿನಲ್ಲಿ ತೇಲುತ್ತಿರುವಂತೆ ಕಾಣುವ ಎರಡು ದ್ವೀಪಗಳೇ “ಅಂಡಮಾನ್ ಮತ್ತು ನಿಕೋಬಾರ್”. 8,073 ಕಿ.ಮೀ ವ್ಯಾಪ್ತಿಯ ಈ ಭೂಭಾಗಳಲ್ಲಿ ಅಂಡಮಾನ್ ಗೆ ಪೋರ್ಟ್ ಬ್ಲೇರ್ ಮತ್ತು ನಿಕೋಬಾರ್ ಗೆ ಕಾರ್ ನಿಕೋಬಾರ್ ರಾಜಧಾನಿಗಳು. ಅಂಡಮಾನ್ ಎನ್ನುವ ಹೆಸರು ಮಲಯಾ ಪದ ಹನುಮಾನ್ ನಿಂದ ಬಂದಿದೆ. ನಿಕೋಬಾರ್ ಎಂದರೆ ನಗ್ನ ಪ್ರಜೆಗಳ ವಾಸಸ್ಥಾನ ಎಂದು ಅರ್ಥದಿಂದ ಕೂಡಿದೆ.

ಶತಕಗಳವರೆಗೂ “ಜಾರ್ವಾ” ಎಂಬ ಬುಡಕಟ್ಟು ಜನರು ಮಾತ್ರ ವಾಸಿಸುತ್ತಿದ್ದ ಈ ದ್ವೀಪಗಳು ಕೆಲವು ರಾಜರ ಪ್ರಯತ್ನದಿಂದಾಗಿ ವಿಶ್ವದ ಕಣ್ಣಿಗೆ ಬಿದ್ದವು. ಚೋಳರು, ಮರಾಠರು, ಆಂಗ್ಲರು ಈ ದ್ವೀಪಗಳನ್ನು ತಮ್ಮ ಸಾರಿಗೆ, ಆಡಳಿತದ ಅಗತ್ಯಗಳಿಗಾಗಿ ಬಳಸಿಕೊಂಡರು. ಭಾರತವನ್ನು ಆಳಿದ ಬ್ರಿಟೀಷರು ಖೈದಿಗಳನ್ನು ಜನ ಸಾಮಾನ್ಯರಿಂದ ದೂರವಿಡಲು ಈ ದ್ವೀಪಗಳನ್ನು “ಪೀನಲ್ ಕಾಲನಿ”ಯಾಗಿ ಬಳಸಿಕೊಂಡರು. ಹೀಗೆ ವಿದೇಶೀಯರ ಆಳ್ವಿಕೆಯ ಸಮಯದಲ್ಲಿ ಭಯಂಕರ ಪ್ರದೇಶವಾಗಿ ಹೆಸರು ಮಾಡಿತ್ತು.

ಹ್ಯಾವ್ಲಾಕ್ ದ್ವೀಪ

ಆದರೆ ಈಗ ಪ್ರಸಿದ್ಧ ಪ್ರವಾಸಿ ತಾಣಗಳಾಗಿ ಹೆಸರು ಮಾಡಿವೆ. ಆದರೆ ಭಾಷೆ, ಸಂಸ್ಕೃತಿ, ಪ್ರವಾಸೋಧ್ಯಮ ದೃಷ್ಟಿಯಿಂದ ಆಸಕ್ತಿಕರವಾಗಿ ಬದಲಾಗಿದೆಯಾದರೂ, ಹೊರಗಿನ ಪ್ರಪಂಚದೊಂದಿಗೆ ಸಂಬಂಧವಿಲ್ಲದೆಯೇ ಇಂದಿಗೂ ಈ ದ್ವೀಪಗಳಲ್ಲಿ ಸುಮಾರು 500 ಜನ ಜ್ವಾರಾ ಬುಡಕಟ್ಟು ಜನರು ವಾಸಿಸುತ್ತಿದ್ದಾರೆ. ಇಲ್ಲಿ ಹಿಂದಿ, ಇಂಗ್ಲೀಷ್, ಬೆಂಗಾಲಿ ಮತ್ತು ಕೆಲವು ಕಡೆ ತೆಲುಗು, ತಮಿಳು ಭಾಷೆ ಬಳಕೆಯಲ್ಲಿದೆ. ಭಾರತೀಯ ರೂಪಾಯಿ ಇಲ್ಲಿನ ಕರೆನ್ಸಿ.

ಸೀ ಪ್ಲೇನ್

ಈ ದ್ವೀಪಗಳಿಗೆ ಹೋಗಲು ಯಾವುದೇ ವೀಸಾ ಬೇಕಿಲ್ಲ. ಇಲ್ಲಿಗೆ ತಲುಪಲು ಎರಡು ಮಾರ್ಗಗಳಿವೆ. ವಿಮಾನ ಪ್ರಯಾಣವಾದರೆ ಚೆನ್ನೈ, ಕೋಲ್ಕತಾ, ವಿಶಾಖಪಟ್ಟಣ, ದೆಹಲಿ, ಭುವನೇಶ್ವರ್, ಹೈದರಾಬಾದ್ ನಿಂದ ಈ ದ್ವೀಪಗಳಿಗೆ ನೇರವಾಗಿ ತಲುಪಬಹುದು. ಇದಕ್ಕಾಗಿ ಸ್ಪೈಸ್ ಜೆಟ್, ಏರ್ ಇಂಡಿಯಾ, ಜೆಟ್ ಏರ್ ವೇಸ್ ನ ವಿಮಾನಗಳು ಹಾರಡುತ್ತವೆ.

ಹಡಗುಗಳ ಮೂಲಕ ಹೋಗಬೇಕೆಂದರೆ ಚೆನ್ನೈ, ಕೋಲ್ಕತಾ, ವಿಶಾಖಪಟ್ಟಣದಿಂದ ಪೋರ್ಟ್ ಬ್ಲೇರ್ ಗೆ ಹೋಗಬಹುದು. ವಿಶಾಖಪಟ್ಟಣದಿಂದ 5 ರೀತಿಯ ಹಡಗುಗಳು ತಿಂಗಳಲ್ಲಿ ಕೆಲವು ದಿನಗಳ ಓಡಾಡುತ್ತವೆ. ಹಡಗು ಪ್ರಯಾಣ ಎರಡರಿಂದ ಮೂರು ಮೂರು ದಿನ ಹಿಡಿಯುತ್ತದೆ. ಪೋರ್ಟ್ ಬ್ಲೇರ್ ಗೆ ತಲುಪಿದ ಹಡಗು ಅಲ್ಲಿ ನಾಲ್ಕು ದಿನಗಳ ಕಾಲ ತಂಗಿರುತ್ತದೆ. ಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ತಲುಪಿದ ನಂತರ ಅಲ್ಲಿಂದ ದೋಣಿಗಳು, ಸೀ ಪ್ಲೇನ್ ಗಳ ಮೂಲಕ ಪ್ರವಾಸಿ ತಾಣಗಳೆಲ್ಲವನ್ನೂ ಸುತ್ತಿ ಬರಬಹುದು. ಇವುಗಳಲ್ಲಿ ದೋಣಿ ಪ್ರಯಾಣ ಕಡಿಮೆ ಖರ್ಚಿನಿಂದ ಕೂಡಿದೆ.

ಪೋರ್ಟ್ ಬ್ಲೇರ್, ಹ್ಯಾವ್ಲಾಕ್ ಐಲ್ಯಾಂಡ್ ನಂತಹ ದೊಡ್ಡ ದ್ವೀಪಗಳೆಲ್ಲಾ ಸುತ್ತಿ ಬರಲು ಆಟೋ ರಿಕ್ಷಾಗಳು, ಟ್ಯಾಕ್ಸಿಗಳಿರುತ್ತವೆ. ನಮ್ಮೊಂದಿಗೆ ಗೈಡ್ ಬಂದರೆ ಎರಡರಷ್ಟು ದುಡ್ಡು ತೆರಬೇಕು. ಸ್ಕೂಟರ್, ಮೋಟಾರ್ ಸೈಕಲ್ ಗಳನ್ನು ಪೋರ್ಟ್ ಬ್ಲೇರ್ ನಲ್ಲಿ ಬಾಡಿಗೆಗೆ ಪಡೆಯಬಹುದು.

ನೀಲ್ ದ್ವೀಪದಲ್ಲಿರುವ ಭರತ್ ಪೂರ್ ಬೀಚ್, ಭಾರತದ ಸ್ವಾತಂತ್ರ್ಯ ಹೋರಾಟಗಳ ಪಳೆಯುಳಿಕೆಗಳಿಗೆ ಸಾಕ್ಷಿಯಾಗಿರುವ ಐತಿಹಾಸಿಕ ಸಲ್ಯುಲಾರ್ ಜೈಲು, ಲೈಮ್ ಸ್ಟೋನ್ ಕೇವ್ಸ್, ಮರೀನಾ ಪಾರ್ಕ್, ರಾಧಾನಗರ್ ಬೀಚ್, ವೈಪರ್ ಐಲ್ಯಾಂಡ್, ರಾಜೀವ್ ಗಾಂಧಿ ವಾಟರ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಪೋರ್ಟ್ ಬ್ಲೇರ್, ಡಿಗ್ಲಿಪುರ್, ರಟ್ಲ್ಯಾಂಡ್ ಐಲ್ಯಾಂಡ್, ಲಿಟಿಲ್ ಅಂಡಮಾನ್ ಇಲ್ಲಿ ನೋಡಬೇಕಿರುವ ಪ್ರವಾಸಿ ತಾಣಗಳು.

ಎಚ್ಚರವಹಿಸಬೇಕಾದ ವಿಷಯಗಳು
ಅಪಾಯ ಸಂಭವಿಸದಂತೆ ಇರಲು ದ್ವೀಪಗಳಲ್ಲಿ ಅನುಮತಿ ಇರುವ ಪ್ರದೇಶಗಳಲ್ಲಿ ಮಾತ್ರ ಸುತ್ತಾಡಬೇಕು. ಟೂರಿಸ್ಟ್ ಗೈಡ್ ಸೇವೆಗಳನ್ನು ಬಳಸಿಕೊಂಡರೆ ನೋಡಬೇಕಿರುವ ಪ್ರದೇಶಗಳ ಸಂಪೂರ್ಣ ಮಾಹಿತಿ ಲಭಿಸುತ್ತದೆ. ಪ್ರಯಾಣದುದ್ದಕ್ಕೂ ಪಾಸ್ಪೋರ್ಟ್, ಮತ್ತಿತರೆ ಗುರುತಿನ ಚೀಟಿಗಳನ್ನು ಜೊತೆಗೆ ಕೊಂಡೊಯ್ಯಬೇಕು. ಸಮುದ್ರದೊಳಗೆ ಹೋಗುವಾಗ ಲೈಫ್ ಗಾರ್ಡ್ಸ್ ಗಳನ್ನು ಸಂಪರ್ಕಿಸಬೇಕು. ಸುರಕ್ಷಿತ ಪ್ರದೇಶಗಳಲ್ಲಿ ಮಾತ್ರ ಈಜಾಡಬೇಕು. ಅಂತರಾಷ್ಟ್ರೀಯ ಅಥವಾ ವೃತ್ತಿಪರ ಸಂಸ್ಥೆಗಳಾದ PADI, CMAS, NAUI, BSAS ಮತ್ತು SSI ನಿಂದ ಸರ್ಟಿಫಿಕೇಟ್ ಹೊಂದಿರುವ ಸ್ಕೂಬಾ ಡೈವರ್ಸ್ ಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಲೈಫ್ ಗಾರ್ಡ್ಸ್ ಗಳಿಗೆ ನೀವಿರುವ ಪ್ರದೇಶದ ಮಾಹಿತಿ ತಿಳಿಸಬೇಕು. ಸಮುದ್ರ ತೀರಗಳಲ್ಲಿ ಕೆಲವು ಕಡೆ ನೆರಳಿಗೆ ಸೂಕ್ತ ವ್ಯವಸ್ಥೆಯಿರುವುದಿಲ್ಲ, ಹೀಗಾಗಿ ಛತ್ರಿಯನ್ನು ಕೊಂಡೊಯ್ಯಬೇಕು. ಪೋರ್ಟ್ ಬ್ಲೇರ್ ನಲ್ಲಿ ಅಗತ್ಯ ಔಷಧಿಗಳು, ತಿಂಡಿಗಳನ್ನು ಖರೀದಿಸಬೇಕು.

ನಿಷೇಧಿತ ಬುಡಕಟ್ಟು ಪ್ರದೇಶಗಳಿಗೆ ಪ್ರವೇಶಿಸಬಾರದು. ಬುಡಕಟ್ಟು ಮೀಸಲು ಪ್ರದೇಶಗಳಲ್ಲಿ ಕ್ಯಾಮೆರಾ, ಫೋನ್ ಗಳಿಂದ ಫೋಟೋ, ವೀಡಿಯೋ ತೆಗೆಯಬಾರದು. ಮೀನುಗಾರಿಕೆ ಇಲಾಖೆ ಅನುಮತಿಯಿಲ್ಲದೆ ಕಪ್ಪೆಚಿಪ್ಪು ಮತ್ತಿತರೆ ಸಮುದ್ರ ಚಿಪ್ಪುಗಳನ್ನು ತರಬಾರದು. ಸಮುದ್ರ ತೀರಗಳು, ಅರಣ್ಯ ಪ್ರದೇಶಗಳಲ್ಲಿ ಟೆಂಟ್ ಹಾಕಿ ಅಲ್ಲಿಯೇ ಇದ್ದುಬಿಡಬಾರದು.

Loading...