ನಿಮ್ಮ ಮೊಬೈಲಿನಲ್ಲಿನ ಎಲ್ಲಾ ಮಾಹಿತಿ ಕದಿಯುತ್ತಿರುವ ಚೀನಾ?

ನೀವು ಸ್ಮಾರ್ಟ್ ಫೋನ್ ಬಳಸುತ್ತಿದ್ದೀರಾ? ಹೌದಾದರೆ, ಮೊಬೈಲ್ ಸಂದೇಶ ಸೇರಿದಂತೆ ಮೊಬೈಲಿನಲ್ಲಿನ ವೈಯುಕ್ತಿಕ ಮಾಹಿತಿ ಕಳುವಿಗೆ ಗುರಿಯಾಗುತ್ತಿರುವ 700 ಮಿಲಿಯನ್ ಜನರಲ್ಲಿ ನೀವೂ ಒಬ್ಬರಾಗಿರಬಹುದು.

ಆಂಡ್ರಾಯ್ಡ್ ಮೊಬೈಲ್ ಬಳಕೆದಾರರ ವೈಯುಕ್ತಿಕ ಮಾಹಿತಿಯೆಲ್ಲಾ ಕಳ್ಳದಾರಿಯಲ್ಲಿ ಚೀನಾ ತಲುಪುತ್ತಿದೆ ಎಂದು ಅಮೆರಿಕದಲ್ಲಿ ಈಗ ಪತ್ತೆಯಾಗಿದೆ. ಸ್ಮಾರ್ಟ್ ಫೋನ್ ಬಳಕೆದಾರರ ಅನುಮತಿ ಇಲ್ಲದೆಯೇ, ಅವರ ಗಮನಕ್ಕೆ ಬಾರದೇ ಅವರ ಮಾಹಿತಿ ರಹಸ್ಯವಾಗಿ ಥರ್ಡ್ ಪಾರ್ಟಿ ಸರ್ವರ್‌ಗಳಿಗೆ ರವಾನೆಯಾಗುತ್ತಿದೆ ಎಂದು ಸಾಫ್ಟ್‌ವೇರ್ ಸೆಕ್ಯೂರಿಟಿ ಸಂಸ್ಥೆ ಕ್ರಿಪ್ಟೋವೈರ್ ಬಹಿರಂಗಪಡಿಸಿದೆ.

ಅಮೆರಿಕದಲ್ಲಿ ಪ್ರಸಿದ್ಧವಾದ ಆನ್ಲೈನ್ ರೀಟೇಲರ್ ಆದ ಅಮೆಜಾನ್, ಬೆಸ್ಟ್ ಬೈ ಮುಂತಾದವುಗಳ ಮೂಲಕ ಮಾರುತ್ತಿರುವ ಎಲ್ಲಾ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಮತ್ತು ಅಮೆರಿಕದ ಬ್ಲೂ ಆರ್ ಹೆಡ್ ಸ್ಮಾರ್ಟ್ ಫೋನ್ ಗಳಲ್ಲಿ ಈ ಕಳುವು ನಡೆಯುತ್ತಿದೆ ಎಂದು ಕ್ಲಿಪ್ಟೋವೈರ್ ಹೇಳಿದೆ.

ಆಂಡ್ರಾಯ್ಡ್ ಉಪಕರಣಗಳಲ್ಲಿ ‘ಕೋರ್ ಮಾನಿಟರಿಂಗ್ ಅಕ್ಟಿವಿಟೀಸ್’ ನಡೆಸುವ ಫರ್ಮ್‌ವೇರ್ ಓವರ್ ದ ಏರ್(ಫೋಟಾ) ಸಾಫ್ಟ್‌ವೇರ್ ಸಿಸ್ಟಮ್ ಅಪ್ಡೇಟ್ ಅನ್ನು ಚೀನಾದ ಶಾಂಘೈ ಅಡಪ್ಸ್ ಟೆಕ್ನಾಲಜಿ ಕೋ ಲಿಮಿಟೆಡ್ ನೀಡುತ್ತಿದೆ. ಈ ಸಾಫ್ಟ್‌ವೇರ್ ಹೊಂದಿದ ಆಂಡ್ರಾಯ್ಡ್ ಫೋನ್ ಗಳಲ್ಲಿ ಆಟೋಮ್ಯಾಟಿಕ್ ಆಗಿ ಬಳಕೆದಾರರ ಟೆಕ್ಸ್ಟ್ ಸಂದೇಶ, ಕಾಂಟಾಕ್ಟ್ಸ್ ಲಿಸ್ಟ್, ಕಾಲ್ ಹಿಸ್ಟರಿ, ಎಲ್ಲಾ ಮೊಬೈಲ್ ಸಂಖ್ಯೆಗಳು, ಇಂಟರ್ನ್ಯಾಷನಲ್ ಮೊಬೈಲ್ ಸಬ್‌ಸ್ಕ್ರೈಬರ್ ಐಡೆಂಟಿಟಿ(ಐಎಂಎಸ್ಐ), ಇಂಟರ್ನ್ಯಾಷನಲ್ ಮೊಬೈಲ್ ಎಕ್ವಿಪ್ಮೆಂಟ್ ಐಡೆಂಟಿಟಿ(ಐಎಂಇಐ) ನಂತಹ ಮೊಬೈಲ್ ನ ಐಡೆಂಟಿಟಿ ನಂಬರ್‌ಗಳೂ ಸೇರಿದಂತೆ ಮಾಹಿತಿಯೆಲ್ಲಾ ಚೀನಾ ಸರ್ವರ್‌ಗಳಿಗೆ ರಹಸ್ಯವಾಗಿ 72 ಗಂಟೆಗಳಿಗೊಮ್ಮೆ ರವಾನೆಯಾಗುತ್ತೆ. ಕಳುವಾದ ಮಾಹಿತಿ ಜಾಹೀರಾತುಗಳಿಗಾಗಿ ಬಳಕೆಯಾಗುತ್ತಾ ಅಥವಾ ಚೀನಾದ ಸರ್ಕಾರ ನಿಗಾ ಇಟ್ಟಿದೆಯಾ ಎಂಬುದು ಇನ್ನೂ ತಿಳಿದುಬಂದಿಲ್ಲ.

ವಿಶ್ವಾದ್ಯಂತ ಅಡಪ್ಸ್ ಕಂಪನಿಗೆ 70 ಕೋಟಿ ಬಳಕೆದಾರರಿದ್ದಾರೆ ಎನ್ನಲಾಗುತ್ತಿದೆ. 150 ದೇಶಗಳಲ್ಲಿ ಸೇವೆ ನೀಡುತ್ತಿರುವ ಈ ಕಂಪನಿಗೆ ಆಂಡ್ರಾಯ್ಡ್ ಮಾರುಕಟ್ಟೆಯಲ್ಲಿ ಶೇ.70 ರಷ್ಟು ಪಾಲು ಇದೆ. ಶಾಂಘೈ, ಶೆಂಜೆನ್, ಬೀಜಿಂಗ್, ಟೋಕ್ಯೋ, ನವದೆಹಲಿ, ಮೊಯಾಮಿ ಮುಂತಾದ ಪ್ರಮುಖ ನಗರಗಳಲ್ಲಿ ಇದರ ಕಛೇರಿಗಳಿವೆ. 400 ಕ್ಕೂ ಹೆಚ್ಚು ಮೊಬೈಲ್ ಆಪರೇಟರ್ ಗಳಿಗೆ, ಸ್ಮಾರ್ಟ್ ಫೋನ್ ಕಂಪನಿಗಳಿಗೆ ಇದು ಸೇವೆ ಸಲ್ಲಿಸುತ್ತಿದ್ದು, ಭಾರತದಲ್ಲಿನ ಸ್ಮಾರ್ಟ್ ಫೋನ್ ಬಳಕೆದಾರರ ಮಾಹಿತಿಯ ಭದ್ರತೆಯ ಕುರಿತೂ ಆತಂಕ ಹುಟ್ಟಿಸುತ್ತಿದೆ.