ಟೆಲಿಕಾಂ ವಲಯ ಐಸಿಯು ದಾಟಿ ಐಸಿಸಿಯು ತಲುಪಿದೆ: ಅನಿಲ್ ಅಂಬಾನಿ – News Mirchi

ಟೆಲಿಕಾಂ ವಲಯ ಐಸಿಯು ದಾಟಿ ಐಸಿಸಿಯು ತಲುಪಿದೆ: ಅನಿಲ್ ಅಂಬಾನಿ

ಎದುರಾಗುತ್ತಿರುವ ತೀವ್ರ ಸ್ಪರ್ಧೆ, ಹೆಚ್ಚುತ್ತಿರುವ ಸಾಲಬಾಧೆಯಿಂದ ಟೆಲಿಕಾಂ ಕ್ಷೇತ್ರ ಇಂಟೆನ್ಸೀವ್ ಕೇರ್ ಯೂನಿಟ್(ಐಸಿಯು) ನಿಂದ ಇಂಟೆನ್ಸಿವ್ ಕ್ರಿಟಿಕಲ್ ಕೇರ್ ಯೂನಿಟ್(ಐಸಿಸಿಯು) ತಲುಪಿದೆ ಎಂದು ರಿಲಯನ್ಸ್ ಕಮ್ಯೂನಿಕೇಶನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ ಬಣ್ಣಿಸಿದ್ದಾರೆ. ಈ ಬೆಳವಣಿಗೆಯಿಂದಾಗಿ ಸರ್ಕಾರ ಮತ್ತು ಸಾಲದಾತರಿಗೂ ಕೂಡಾ ದೊಡ್ಡ ಅಪಾಯ ಕಾದಿದೆ ಎಂದು ಅವರು ಎಚ್ಚರಿಸಿದರು.

ಮಾರುಕಟ್ಟೆಯಲ್ಲಿ ಏಕಸ್ವಾಮ್ಯ

ಮಾರುಕಟ್ಟೆಯು ಏಕಸ್ವಾಮ್ಯ ಪ್ರವೃತ್ತಿಯ ದಾರಿಯಲ್ಲಿ ಸಾಗುತ್ತಿದೆ ಎಂದು ಅನಿಲ್ ಅಂಬಾನಿ ಆತಂಕ ವ್ಯಕ್ತಪಡಿಸಿದರು. ಮಂಗಳವಾರ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. “ಯಾವ ರೀತಿ ನೋಡಿದರೂ ವೈರ್ಲೆಸ್ ಕ್ಷೇತ್ರವು ಐಸಿಯು ದಾಟಿ ಐಸಿಸಿಯು ಸೇರಿದೆ. ಇತ್ತ ಆದಾಯದ ದೃಷ್ಟಿಯಿಂದ ನೋಡಿದರೂ ಸರ್ಕಾರಕ್ಕೆ ಮತ್ತು ಬ್ಯಾಂಕಿಂಗ್ ವಲಯಕ್ಕೆ ನಷ್ಟವುಂಟು ಮಾಡಲಿದೆ. ಇದು ಒಂದು ಕ್ಷೇತ್ರವನ್ನು ನಾಶಗೊಳಿಸುವ ಯತ್ನ ಎಂದು ನಾನು ಭಾವಿಸುತ್ತಿದ್ದೇನೆ” ಎಂದು ಅನಿಲ್ ಹೇಳಿದರು.

ಟೆಲಿಕಾಂ ಕ್ಷೇತ್ರಕ್ಕೆ ನಿಂತ ಆರ್ಥಿಕ ನೆರವು

ಏಪ್ರಿಲ್ ನಲ್ಲಿ ರಿಸರ್ವ್ ಬ್ಯಾಂಕ್ ಎಚ್ಚರಿಸಿದ ನಂತರ ಬ್ಯಾಂಕುಗಳಿಂದ ಟೆಲಿಕಾಂ ವಲಯಕ್ಕೆ ಬರುತ್ತಿದ್ದ ಆರ್ಥಿಕ ನೆರವೂ ಸಂಪೂರ್ಣ ಸ್ಥಗಿತಗೊಂಡಿದೆ. ಒಂದು ಕಾಲದಲ್ಲಿ ಒಂದು ಡಜನ್ ಗೂ ಅಧಿಕ ಕಂಪನಿಗಳಿದ್ದವು. ಆದರೆ ಈಗ ಅವುಗಳ ಸಂಖ್ಯೆ 6 ಕ್ಕೆ ಇಳಿದಿದೆ. ಬಹುತೇಕ ಅಂತರಾಷ್ಟ್ರೀಯ ಕಂಪನಿಗಳೆಲ್ಲಾ ವಾಪಸ್ ಹೋಗಿವೆ. ಮಾರುಕಟ್ಟೆಯಲ್ಲಿ ಕ್ರಮೇಣ ಸ್ಪರ್ಧೆ ಕಡಿಮೆಯಾಗಿ ಏಕಸ್ವಾಮ್ಯ ಧೋರಣೆ ನೆಲೆಸುವ ಆತಂಕವಿದೆ ಎಂದು ಅನಿಲ್ ಹೇಳಿದ್ದಾರೆ.

ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಅತಿ ಕಡಿಮೆ ದರಗಳಲ್ಲಿ ಸೇವೆ ನೀಡಲು ಆರಂಭಿಸಿದ ನಂತರ ಟೆಲಿಕಾಂ ವಲಯದಲ್ಲಿ ಇತರೆ ಕಂಪನಿಗಳಿಗೆ ನಡುಕು ಹುಟ್ಟಿಸಿದ್ದು ತಿಳಿದದ್ದೇ. ಈ ಹಿನ್ನೆಲೆಯಲ್ಲಿ ಮುಖೇಶ್ ಅಂಬಾನಿ ಸಹೋದರ ಅನಿಲ್ ಅಂಬಾನಿ ಹೇಳಿಕೆ ಮಹತ್ವ ಪಡೆದಿವೆ. ಮತ್ತೊಂದೆಡೆ ಸಾಲ ನೀಡಿದವರೆಲ್ಲಾ ಸಹಕರಿಸುತ್ತಿರುವುದರಿಂದಾಗಿ ಮಾರ್ಚ್ ವೇಳೆಗೆ ತಮ್ಮ ಕಂಪನಿ ಸಮಸ್ಯೆಗಳಿಂದ ಹೊರಬರಲಿದೆ ಎಂದು ಅನಿಲ್ ಅಂಬಾನಿ ವಿಶ್ವಾಸ ವ್ಯಕ್ತಪಡಿಸಿದರು.

ಬ್ಲಾಕ್ ಮೇಲ್ ಮಾಡುವವರನ್ನು ಆಮಂತ್ರಿಸಬೇಡಿ

ನ್ಯಾಯಾಲಯಗಳು ನಿಯಂತ್ರಕ ಸಂಸ್ಥೆಗಳಿಂದ ಹಸ್ತಕ್ಷೇಪದಿಂದ ಅಡಚಣೆಗಳು ಎದುರಾಗುತ್ತಿವೆ, ಆದರೆ ಆರ್.ಕಾಮ್ ಅವುಗಳನ್ನು ಗೌರವಿಸುತ್ತದೆ ಎಂದು ಅನಿಲ್ ಅಂಬಾನಿ ಹೇಳಿದರು. ಏರ್ ಸೆಲ್ ನ ವಿಲೀನ ಯೋಜನೆ ಜಾರಿಗೆ ಒಂದು ವರ್ಷ ತಡವಾಗಲು ನೀವೇ ಕಾರಣ ಎಂದು ಒಬ್ಬ ಶೇರ್ ಹೋಲ್ಡರ್ ಕಡೆ ನೋಡಿ ಅನಿಲ್ ಗಂಭೀರ ಆರೋಪ ಮಾಡಿದರು. ಇಂತಹ ಬ್ಲಾಕ್ ಮೇಲ್ ಮಾಡುವವರನ್ನು ಇಂತಹ ಸಮಾವೇಶಗಳಿಗೆ ಬರದಂತೆ ನೋಡಿಕೊಳ್ಳಬೇಕು ಎಂದು ನಿಯಂತ್ರಕ ಸಂಸ್ಥೆಗಳಿಗೆ ನಮ್ಮ ಕಂಪನಿ ಪತ್ರ ಬರೆಯುತ್ತದೆ ಎಂದು ಹೇಳಿದರು.

Get Latest updates on WhatsApp. Send ‘Add Me’ to 8550851559

Loading...