ಬ್ಯಾಂಕುಗಳ ಒತ್ತಡಕ್ಕೆ ಸುಸ್ತಾದ ಅನಿಲ್ ಅಂಬಾನಿ, ಆಸ್ತಿ ಮಾರಾಟಕ್ಕೆ ಯತ್ನ

ರಿಲಯನ್ಸ್ ಮುಖ್ಯಸ್ಥ ಅನಿಲ್ ಅಂಬಾನಿಗೆ ಸಾಲಗಳನ್ನು ಮರುಪಾವತಿ ಮಾಡುವಂತೆ ಬ್ಯಾಂಕುಗಳಿಂದ ತೀವ್ರ ಒತ್ತಡ ಎದುರಾಗುತ್ತಿದೆ. ಬ್ಯಾಂಕುಗಳ ಸಾಲಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರ್.ಬಿ.ಐ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೆ, ಬ್ಯಾಂಕುಗಳು ಕೂಡ ಕಂಪನಿಗಳ ಮೇಲೆ ಸಾಲ ಮರುಪಾವತಿಸುವಂತೆ ಒತ್ತಡಗಳನ್ನು ಹೇರುತ್ತಿವೆ. ಈ ಹಿನ್ನೆಲೆಯಲ್ಲಿ ಅನಿಲ್ ಅಂಬಾನಿ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದಾರೆ. ಸಮ್ಮರ್ ಅಸೆಟ್ ಸೇಲ್ ಅನ್ನು ಮತ್ತಷ್ಟು ಕಾಲ ಮುಂದುವರೆಸಲು ತೀರ್ಮಾನಿಸಿದ್ದಾರೆ. ಈ ಮಾರಾಟದಲ್ಲಿ ಅಂಬಾನಿ ಹಿಡಿತದಲ್ಲಿರುವ ಕಂಪನಿಗಳ ರಸ್ತೆ ಸ್ವತ್ತುಗಳನ್ನು, ಸಮುದ್ರ ಗರ್ಭದಲ್ಲಿನ ವ್ಯಾಪಾರಗಳನ್ನು, ಮುಂಬೈ ಮತ್ತು ದೆಹಲಿಯಲ್ಲಿನ ಪ್ರಮುಖ ರಿಯಲ್ ಎಸ್ಟೇಟ್ ವ್ಯಾಪಾರಗಳನ್ನು ಮಾರುವ ಪ್ರಯತ್ನಗಳನ್ನು ತ್ವರಿತಗೊಳಿಸುತ್ತಿದ್ದಾರೆ ಎನ್ನಲಾಗಿದೆ.

ಈ ವ್ಯವಹಾರದಲ್ಲಿ ಮುಖ್ಯವಾದದ್ದು ಎರಡು. ಒಂದು ಗ್ರೂಪ್ ಗೆ ಸೇರಿದ ಫೋನ್ ಟ್ರಾನ್ಸ್ ಮಿಷನ್ ಟವರ್ ಗಳನ್ನು ಮಾರುವುದು, ಎರಡನೆಯದು ತಮ್ಮ ವೈರ್ಲೆಸ್ ಚಟುವಟಿಕೆಗಳನ್ನು ಏರ್ ಸೆಲ್ ಲಿಮಿಟೆಡ್ ನಲ್ಲಿ ವಿಲೀನ ಮಾಡುವುದು. ಒಂದು ವೇಳೆ ಈ ಎರಡೂ ವ್ಯವಹಾರಗಳು ಸಾಲದಿದ್ದರೆ, ಒಂದು ವಾರದ ಅವಧಿಯಲ್ಲಿ ಎರಡು ಇನ್ಷಿಯಲ್ ಪಬ್ಲಿಕ್ ಆಫರ್ ಗಳನ್ನು ಕೈಗೊಳ್ಳಬೇಕು ಎಂದು ಗ್ರೂಪ್ ನ ಫೈನಾನ್ಸ್ ಘಟಕಗಳು ತೀರ್ಮಾನಿಸಿವೆ. ಗ್ರೂಪ್ ಸಾಲದ ಹೊರೆಯನ್ನು ಮೂರು ಭಾಗ ಕಡಿಮೆ ಮಾಡಲು 4.5 ಬಿಲಿಯನ್ ಡಾಲರ್(ರೂ.29,038 ಕೋಟಿ) ಯಷ್ಟು ನಿಧಿಗಳನ್ನು ಸಂಗ್ರಹಿಸಬೇಕು ಎಂಬ ಗುರಿಯನ್ನು ಅನಿಲ್ ಅಂಬಾನಿ ಹೊಂದಿದ್ದಾರೆ ಎನ್ನಲಾಗಿದೆ.

ಭಾರತದ ಇತಿಹಾಸದಲ್ಲಿ ಕಂಪನಿಯೊಂದು ಇಷ್ಟು ದೊಡ್ಡ ಪ್ರಮಾಣದಲ್ಲಿ ಸಾಲ ಮರುಪಾವತಿಗೆ ಮುಂದಾಗಿರುವುದು ಇದೇ ಮೊದಲು ಎಂದು ಜೂನ್ ಮೊದಲ ವಾರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಅಂಬಾನಿ ಹೇಳಿದ್ದರು. ತಮ್ಮ ಕಂಪನಿಯ ಮುಂದಿನ ದಿನಗಳಲ್ಲಿ ಷೇರುದಾರರ ಮೌಲ್ಯ ಹೆಚ್ಚಿಳಕ್ಕೆ ಪ್ರಯತ್ನಿಸುತ್ತದೆ, ಹಾಗೆಯೇ ಸಾಲಗಳು ಮಿತಿಯಲ್ಲಿ ಇಡಲು ಶ್ರಮಿಸುತ್ತಿದ್ದೇವೆ ಎಂದು ಅವರು ಹೇಳಿದ್ದರು. ಆರ್ ಕಾಮ್ ಗೆ ಈಗಾಗಲೇ ರೂ.46 ಸಾವಿರ ಕೋಟಿವರೆಗೂ ಸಾಲಗಳಿವೆ. ಅಣ್ಣ ಮುಖೇಶ್ ಅಂಬಾನಿ ಟೆಲಿಕಾಂ ಕ್ಷೇತ್ರದಲ್ಲಿ ಕಾಲಿಟ್ಟು ಜಿಯೋ ಆರಂಭಿಸಿದ ನಂತರ ಅನಿಲ್ ಅಂಬಾನಿ ಕಂಪನಿಯ ಸಾಲಗಳು ಹೆಚ್ಚಾಗಿದ್ದಲ್ಲದೆ, ಷೇರುಗಳು ಕೂಡಾ ಕನಿಷ್ಟ ಮಟ್ಟ ಶೇ.60 ಕ್ಕೆ ಬಿದ್ದಿವೆ.