ಬಿಸಿಸಿಐ ವರ್ತನೆಗೆ ಬೇಸತ್ತು ಕೋಚ್ ಹುದ್ದೆಗೆ ಅನಿಲ್ ಕುಂಬ್ಳೆ ರಾಜೀನಾಮೆ! – News Mirchi
We are updating the website...

ಬಿಸಿಸಿಐ ವರ್ತನೆಗೆ ಬೇಸತ್ತು ಕೋಚ್ ಹುದ್ದೆಗೆ ಅನಿಲ್ ಕುಂಬ್ಳೆ ರಾಜೀನಾಮೆ!

ಟೀಮ್ ಇಂಡಿಯಾ ಮುಖ್ಯ ತರಬೇತುದಾರ ಅನಿಲ್ ಕುಂಬ್ಲೆ ಅನಿರೀಕ್ಷಿತ ತೀರ್ಮಾನ ತೆಗೆದುಕೊಂಡಿದ್ದಾರೆ. ಬಿಸಿಸಿಐ ವರ್ತನೆಗೆ ಬೇಸತ್ತಿರುವ ಕುಂಬ್ಲೆ ಮಂಗಳವಾರ ಸಂಜೆ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಮಂಗಳವಾರ ಟೀಮ್ ಇಂಡಿಯಾದೊಂದಿಗೆ ಅವರು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಬೇಕಿತ್ತು. ಆದರೂ, ಈ ಪ್ರವಾಸದಿಂದ ದೂರವುಳಿದ ಕುಂಬ್ಳೆ ಯಾರೂ ನಿರೀಕ್ಷಿಸದಂತಹ ತೀರ್ಮಾನಕ್ಕೆ ಬಂದಿದ್ದಾರೆ.

ಕಳೆದ ಕೆಲ ದಿನಗಳಿಂದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಕುಂಬ್ಳೆ ನಡುವೆ ತೀವ್ರ ಭಿನ್ನಾಭಿಪ್ರಾಯಗಳು ಇರುವುದಾಗಿ ಸುದ್ದಿಗಳು ಬರುತ್ತಿವೆ. ಇದರ ಬೆನ್ನಲ್ಲೇ ಕುಂಬ್ಳೆ ರಾಜೀನಾಮೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಅನಿಲ್ ಕುಂಬ್ಳೆ ಟೀಮ್ ಇಂಡಿಯಾ ಕೋಚ್ ಹುದ್ದೆಯ ಜವಾಬ್ದಾರಿ ಹೊತ್ತು ಕೇವಲ ಒಂದು ವರ್ಷ ಕಳೆದಿದೆ. ಸಹಜವಾಗಿಯೇ ಈ ಸ್ಪಿನ್ ದಿಗ್ಗಜನನ್ನು ಕೋಚ್ ಹುದ್ದೆಯಲ್ಲಿ ಮತ್ತೊಂದು ವರ್ಷ ವಿಸ್ತರಿಸುತ್ತಾರೆ ಎಂದೇ ಎಲ್ಲಾ ಭಾವಿಸಿದ್ದರು. ಕುಂಬ್ಳೆ ಕೋಚ್ ಆದ ನಂತರ ಟೀಮ್ ಇಂಡಿಯಾ ಭರ್ಜರಿ ಗೆಲುವುಗಳನ್ನೇ ಕಂಡಿದೆ. ಆದರೂ ವಿರಾಟ್ ಕೊಹ್ಲಿ ಸೇರಿದಂತೆ ಇತರೆ ಆಟಗಾರರು ಕುಂಬ್ಳೆಗೆ ವಿರುದ್ಧವಿರುವುದರಿಂದ ಅವರ ಅವಧಿಯನ್ನು ವಿಸ್ತರಿಸದ ಬಿಸಿಸಿಐ, ಕೋಚ್ ಹುದ್ದೆಗೆ ಮತ್ತೆ ಸಂದರ್ಶನ ನಡೆಸುವುದಾಗಿ ಹೇಳಿತ್ತು. ಹೊಸ ಕೋಚ್ ನೇಮಕ ಮಾಡುವುದಾಗಿ ಹೇಳುತ್ತಿದ್ದಂತೆ ಕುಂಬ್ಳೆ ಕೂಡಾ ಸಂದರ್ಶನಕ್ಕೆ ಅರ್ಜಿ ಸಲ್ಲಿಸಿ ಭಾರತ ತಂಡಕ್ಕೆ ಇನ್ನೂ ಸೇವೆ ಸಲ್ಲಿಸುವ ಆಸೆ ಇದೆ ಎಂದು ಆಸಕ್ತಿ ವ್ಯಕ್ತಪಡಿಸಿದ್ದರು. ಆದರೂ ಭಾರತದಲ್ಲಿ ತಂಡದಲ್ಲಿ ಹಿಡಿತ ಸಾಧಿಸಿರುವ ನಾಯಕ ವಿರಾಟ್ ಕೊಹ್ಲಿ ಹಠವೇ ಗೆದ್ದಿದೆ.

Contact for any Electrical Works across Bengaluru

Loading...
error: Content is protected !!