ಬಳ್ಳಾರಿ: ಅನ್ನ ಭಾಗ್ಯದ ಅಕ್ಕಿ ಆಂಧ್ರದ ಹೋಟೆಲ್ ಗಳಲ್ಲಿ ಇಡ್ಲಿ ದೋಸೆ

ರಾಜ್ಯ ಸರ್ಕಾರದ ಮಹತ್ವದ ಅನ್ನ ಭಾಗ್ಯ ಯೋಜನೆಯಲ್ಲಿ ಬಡವರಿಗೆ ನೀಡುತ್ತಿರುವ ಅಕ್ಕಿ ಪಕ್ಕದ ಆಂಧ್ರಪ್ರದೇಶದ ಪ್ರದೇಶದ ಹೋಟೆಲ್ ಗಳನ್ನು ಸೇರುತ್ತಿದೆ. ಅಲ್ಲಿ ಹೋಟೆಲ್ ಗಳಲ್ಲಿ ಅನ್ನಭಾಗ್ಯದ ಅಕ್ಕಿ ಇಡ್ಲಿ ಮತ್ತು ದೋಸೆಗಳಲ್ಲಿ ಬಳಕೆಯಾಗುತ್ತಿದೆ.

ಯಾವುದೇ ವ್ಯಕ್ತಿ ಹಸಿವಿನಿಂದ ಖಾಲಿ ಹೊಟ್ಟೆಯಲ್ಲಿ ಮಲಗಬಾರದು ಎಂದು ಹೇಳಿದ್ದ ಸಿಎಂ ಸಿದ್ದರಾಮಯ್ಯ ಸರ್ಕಾರ, ಬಿಪಿಎಲ್ ಕುಟುಂಬಗಳ ಪ್ರತಿ ವ್ಯಕ್ತಿಗೆ 7 ಕೆಜಿ ಅಕ್ಕಿಯನ್ನು ವಿತರಿಸುತ್ತಿತ್ತು. ಸರ್ಕಾರದ ಉದ್ದೇಶ ಒಳ್ಳೆಯದಿದ್ದರೂ ಹಲವು ಕಡೆ ಇದು ದುರುಪಯೋಗವಾಗುತ್ತಿದೆ. ಬಳ್ಳಾರಿಯಲ್ಲೀಗ ಇದೀಗ ಅಂತಹ ದುರುಪಯೋಗ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಬಳ್ಳಾರಿ ಜಿಲ್ಲೆಯಲ್ಲಿ ಅನ್ನ ಭಾಗ್ಯದ ಅಕ್ಕಿಯನ್ನು ಖರೀದಿಸಿಲು ಮಧ್ಯವರ್ತಿಗಳು ಎರಡು ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ನ್ಯಾಯಬೆಲೆ ಅಂಗಡಿಗಳ ಮಾಲೀಕರಿಂದ ನೇರವಾಗಿ ಖರೀದಿಸುವುದು ಮತ್ತು ಕೆಲ ಮಹಿಳೆಯರನ್ನು ನೇಮಿಸಿಕೊಂಡು ಬಿಪಿಲ್ ಕಾರ್ಡ್ ಹೊಂದಿರುವವರಿಂದ ದುಡ್ಡು ಕೊಟ್ಟು ಅಕ್ಕಿ ಸಂಗ್ರಹಿಸುವ ಮೂಲಕ‌ ಸರ್ಕಾರದ ಯೋಜನೆಯ ಲಾಭ ಪಡೆಯುತ್ತಿದ್ದಾರೆ.

ಬಿಪಿಎಲ್ ಕಾರ್ಡುದಾರರಿಗೆ ಹೆಚ್ಚು ಹಣ ಆಮಿಷ ತೋರಿಸಿ ಅಕ್ಕಿ ಖರೀದಿಸುವ ಮಧ್ಯವರ್ತಿಗಳು, ಖರೀದಿಸಿದ ಅಕ್ಕಿಯನ್ನು ಗೋಡೌನ್ ಗಳಲ್ಲಿ ಇಟ್ಟು ಆಂಧ್ರದ ಮಧ್ಯವರ್ತಿಗಳಿಗೆ ಹೆಚ್ಚು ಬೆಲೆಗೆ ಮಾರುತ್ತಾರೆ.

ಬಿಪಿಎಲ್ ಕಾರ್ಡ್ ಹೊಂದಿರುವವರಿಂದ ಅಕ್ಕಿ ಸಂಗ್ರಹಿಸಲೆಂದೇ ಕೆಲ ಮಹಿಳೆಯರನ್ನು ನೇಮಕ ಮಾಡಿಕೊಂಡಿದ್ದಾರೆ. ಈ ಮಹಿಳೆಯರು ಕೆಜಿ ಅಕ್ಕಿಗೆ ರೂ. 6 ರಿಂದ 10 ನೀಡಿ ಬಡವರ ಬಳಿ ಖರೀದಿಸಿ ಮಧ್ಯವರ್ತಿಗೆ ನೀಡುತ್ತಾರೆ. ಹೀಗೆ ಬಡವರ ಹೊಟ್ಟೆ ತುಂಬಿಸಬೇಕಾದ ಅಕ್ಕಿ ಆಂಧ್ರದ ಹೋಟೆಲ್ ಗಳನ್ನು ಸೇರುತ್ತಿದೆ.

ಮಾರ್ಚ್ 18 ರಂದು ಹೀಗೆ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಸ್ಥಳದ ಮೇಲೆ ದಾಳಿ ನಡೆಸಿದ್ದ ಪೊಲೀಸರು 7 ಲಕ್ಷ ಮೌಲ್ಯದ ಸುಮಾರು 258 ಕ್ವಿಂಟಾಲ್ ಅಕ್ಕಿ ಮತ್ತು 9.5 ಕ್ವಿಂಟಾಲ್ ಗೋಧಿ ಮತ್ತಿತರ ಧಾನ್ಯಗಳನ್ನು ವಶಪಡಿಸಿಕೊಂಡಿದ್ದರು. ಈ ಅಕ್ರಮದಲ್ಲಿ ಭಾಗಿಯಾಗಿದ್ದ ಮೂರು ನ್ಯಾಯಬೆಲೆ ಅಂಗಡಿಗಳ ಪರವಾನಗಿಯನ್ನು ರದ್ದು ಮಾಡಲಾಗಿದೆ.

ಇತ್ತೀಚೆಗೆ 9 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿಯನ್ನು ಸಾಗಿಸಲು ಪ್ರಯತ್ನಿಸುತ್ತಿದ್ದ ಮೂವರು ಮಹಿಳೆಯರನ್ನು ಪೊಲೀಸರು ನಗರದ ಎಪಿಎಂಸಿ ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿದ್ದರು. ಆ ಮಹಿಳೆಯರು ನೀಡಿದ ಮಾಹಿತಿ ಆಧಾರದ ಮೇಲೆ ಈ ದಂಧೆ ನಡೆಸುತ್ತಿರುವ ಇಬ್ಬರು ಮಧ್ಯವರ್ತಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Loading...
error: Content is protected !!