ರಾಜಕೀಯ ಪ್ರವೇಶಿಸದಂತೆ ಪ್ರಮಾಣಪತ್ರಕ್ಕೆ ಸಹಿ ಹಾಕಿಸಿಕೊಳ್ಳಲಿದ್ದಾರಂತೆ ಹಜಾರೆ

ಅರವಿಂದ್ ಕೇಜ್ರಿವಾಲ್ ಅವರಿಂದ ಪಾಠ ಕಲಿತಂತಿರುವ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ತಮ್ಮ ಮುಂದಿನ ಚಳುವಳಿಯಲ್ಲಿ ಭಾಗವಹಿಸುವ ಸ್ವಯಂಸೇವಕರಿಗೆ ಹೊಸ ಷರತ್ತನ್ನು ಹಾಕುತ್ತಿದ್ದಾರೆ. ಚಳುವಳಿಯಲ್ಲಿ ಭಾಗವಹಿಸುವವರು ಭವಿಷ್ಯತ್ತಿನಲ್ಲಿ ರಾಜಕೀಯ ಪ್ರವೇಶಿಸದೆ ಸಾಮಾಜಿಕ ಕಾರ್ಯಗಳಲ್ಲಿಯೇ ಉಳಿಯುವುದಾಗಿ ಪ್ರಮಾಣಪತ್ರಕ್ಕೆ ಸಹಿ ಹಾಕಿಸಿಕೊಳ್ಳುವುದಾಗಿ ಹೇಳಿದ್ದಾರೆ.

ಮಾತಿಗೆ ತಪ್ಪಿದರೆ ಕೋರ್ಟಿಗೆ

ನಮ್ಮ ಚಳುವಳಿಗೆ ಕಳಂಕರಹಿತ ಮತ್ತು ಸಮರ್ಪಣಾ ಮನೋಭಾವವುಳ್ಳವರು ಬೇಕಿದ್ದಾರೆ. ಹೀಗಾಗಿ ಪ್ರಾಮಾಣಿಕ ವ್ಯಕ್ತಿಗಳು ನಮ್ಮ ಜೊತೆ ಕೈಜೋಡಿಸುವುದನ್ನು ಖಾತ್ರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಅವರಿಂದ ರಾಜಕೀಯ ಪ್ರವೇಶಿಸದಂತೆ ಪ್ರಮಾಣಪತ್ರಗಳಿಗೆ ಸಹಿ ಹಾಕಿಸಿಕೊಳ್ಳುತ್ತೇವೆ. ಚಳುವಳಿಯಲ್ಲಿ ಭಾಗವಹಿಸುವ ಜನರ ಸಂಖ್ಯೆಯಲ್ಲಿ ಕಡಿಮೆಯಾದರೂ ಚಿಂತೆಯಿಲ್ಲ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ. ಪ್ರಮಾಣಪತ್ರಕ್ಕೆ ಸಹಿ ಹಾಕಿಯೂ ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷ ಸೇರಿದರೆ ಅವರನ್ನು ಕೋರ್ಟ್ ಮೆಟ್ಟಿಲೇರಿಸುತ್ತಾರಂತೆ.

ಈಗಾಗಲೇ ಕರ್ನಾಟಕ, ಅಸ್ಸಾಂ, ಅರುಣಾಚಲ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ತಮಿಳುನಾಡು, ಒಡಿಶಾ ಮತ್ತು ಉತ್ತರ ಪ್ರದೇಶಗಳಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಿದ್ದು, ಮಾರ್ಚ್ 23 ರಂದು ನಡೆಸುವ ಪ್ರತಿಭಟನಾ ರ್ಯಾಲಿಗೆ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿರುವುದಾಗಿ ಅವರು ಹೇಳಿದರು.

ಈ ಹಿಂದೆ ಭ್ರಷ್ಟಾಚಾರದ ವಿರುದ್ಧ ನಡೆದ ಚಳುವಳಿಯಲ್ಲಿ ಭಾಗವಹಿಸಿದ್ದ ಅರವಿಂದ್ ಕೇಜ್ರಿವಾಲ್ ಎಂದಿಗೂ ರಾಜಕೀಯ ಪ್ರವೇಶಿಸುವುದಿಲ್ಲವೆಂದು ಹೇಳಿದ್ದರು. ಆದರೆ ನಂತರ ಅವರು ಪಕ್ಷ ಸ್ಥಾಪಿಸಿದರು. ಆಗ ರಾಜಕೀಯ ಪ್ರವೇಶಿಸುವುದಿಲ್ಲವೆಂದು ಪ್ರಮಾಣಪತ್ರ ಪಡೆದಿದ್ದರೆ ಇಂದು ಅವರು ಮುಖ್ಯಮಂತ್ರಿಯಾಗಲು ಸಾಧ್ಯವಿರುತ್ತಿರಲಿಲ್ಲ ಎಂದು ಹಜಾರೆ ಹೇಳಿದ್ದಾರೆ. ಅಂದ ಹಾಗೆ ಮಾರ್ಚ್ 23 ರಿಂದ ಪ್ರಬಲ ಲೋಕಪಾಲ್ ಮತ್ತು ಬೆಳೆಗಳಿಗೆ ಲಾಭದಾಯಕ ದರಗಳಿಗಾಗಿ ಒತ್ತಾಯಿಸಿ ಚಳುವಳಿ ಆರಂಭಿಸುತ್ತಿದ್ದಾರೆ.

Get Latest updates on WhatsApp. Send ‘Subscribe’ to 8550851559