ಮತ್ತೊಬ್ಬ ಹಿಜ್ಬುಲ್ ಉಗ್ರನ ಹತ್ಯೆ – News Mirchi

ಮತ್ತೊಬ್ಬ ಹಿಜ್ಬುಲ್ ಉಗ್ರನ ಹತ್ಯೆ

ಶ್ರೀನಗರ: ಜಮ್ಮೂ ಕಾಶ್ಮೀರ ಉಗ್ರರನ್ನು ಹುಟ್ಟಡಗಿಸುವ ಕೆಲಸ ಮುಂದುವರೆದಿದೆ. ಮೊನ್ನೆಯಷ್ಟೇ ಲಷ್ಕರ್-ಇ-ತೊಯ್ಬಾ ಟಾಪ್ ಕಮಾಂಡರ್ ಅಬು ದುಜಾನಾ ನನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು, ನಿನ್ನೆ ರಾತ್ರಿಯಿಂದ ಉಗ್ರರ ಭೇಟೆ ಮುಂದುವರೆಸಿದ್ದವು. ಅನಂತ್ ನಾಗ್ ಜಿಲ್ಲೆಯಲ್ಲಿ ಎನ್ಕೌಂಟರ್ ನಡೆಸಿ ಹಿಜ್ಬುಲ್ ಮುಜಾಹಿದೀನ್ ಉಗ್ರನೊಬ್ಬನನ್ನು ಹತ್ಯೆ ಮಾಡಿದ್ದಾರೆ. ಜಿಲ್ಲೆಯಲ್ಲಿನ ಬಿಜ್ಬೆಹರಾ ವಲಯದಲ್ಲಿ ಉಗ್ರರು ಅಡಗಿರುವ ಗುಪ್ತಚರ ಮೂಲಗಳ ಮಾಹಿತಿ ಆಧಾರದ ಮೇಲೆ ಕಳೆದ ರಾತ್ರಿ ಪೊಲೀಸರು, ಸಿ.ಆರ್.ಪಿ.ಎಫ್, ಯೋಧರು ಜಂಟಿ ಕಾರ್ಯಚರಣೆ ನಡೆಸಿದ್ದರು. ಮನೆಯೊಂದನ್ನು ಸುತ್ತುವರೆದಾಗ ಭದ್ರತಾ ಪಡೆಗಳ ಮೇಲೆ ಉಗ್ರರು ಗುಂಡಿನ ದಾಳಿಗೆ ಮುಂದಾಗಿದ್ದಾರೆ. ಹೀಗಾಗಿ ಪ್ರತಿದಾಳಿ ನಡೆಸಿದ ಭದ್ರತಾ ಪಡೆಗಳು ಉಗ್ರನೊಬ್ಬನನ್ನು ಕೊಂದಿದ್ದಾರೆ.

ಇನ್ನಿಬ್ಬರು ಉಗ್ರರು ಪರಾರಿಯಾಗಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ. ಮೃತ ಉಗ್ರನನ್ನು ಅನಂತ್ ನಾಗ್ ಜಿಲ್ಲೆಯ ಯಾವರ್ ಎಂದು ಹೇಳಲಾಗಿದೆ. ಕಾಶ್ಮೀರ ಕಣಿವೆಯಲ್ಲಿ ಭದ್ರತಾಪಡೆಯ ಮೆಲೆ ಕಲ್ಲೆಸೆದ ಪ್ರತಿಭಟನಾಕಾರರಲ್ಲಿ ಒಬ್ಬನಾದ ಯಾವರ್, ಕಳೆದ ತಿಂಗಳಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯಲ್ಲಿ ಸೇರಿದ್ದನೆಂದು ಅಧಿಕಾರಿಗಳು ಹೇಳಿದ್ದಾರೆ. ಉಗ್ರರ ವಿರುದ್ಧ ಗುಂಡು ಹಾರಿಸುತ್ತಿದ್ದಾಗ ನಾಗರಿಕನೊಬ್ಬ ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ. ಘಟನೆ ನಡೆದ ಸ್ಥಳದಿಂದ ಬಂದೂಕು, ಮೊಬೈಲ್ ಫೋನ್ ಅನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ.

Loading...