ನಿವೃತ್ತಿ ನಂತರ ಹಮೀದ್ ಅನ್ಸಾರಿ ರಾಜಕೀಯ ಆಶ್ರಯಕ್ಕೆ ಯತ್ನಿಸುತ್ತಿರಬಹುದು : ಬಿಜೆಪಿ

ದೇಶದ ಮುಸ್ಲಿಮರಲ್ಲಿ ಅಸುರಕ್ಷತೆಯ ಭಾವ ಇದೆ ಎಂದ ನಿರ್ಗಮಿತ ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರ ವಿವಾದಿತ ಹೇಳಿಕೆಗೆ ಬಿಜೆಪಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಅನ್ಸಾರಿ ಅವರಿಂದ ಈ ರೀತಿಯ ಕ್ಷುಲ್ಲಕ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ ಎಂದು ಬಿಜೆಪಿ ಹೇಳಿದೆ. ನಿವೃತ್ತಿಯ ನಂತರ ರಾಜಕೀಯ ಆಶ್ರಯ ಪಡೆಯಲು ಅನ್ಸಾರಿ ಅವರು ಈ ಮಾತು ಹೇಳಿರಬಹುದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗೀಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ, ಅವರು ನಿವೃತ್ತರಾಗುತ್ತಿರುವುದರಿಂದ ಇಂತಹ ಹೇಳಿಕೆ ನೀಡಿದ್ದಾರೆ. ಅವರು ಇನ್ನೂ ಉಪರಾಷ್ಟ್ರಪತಿಯಾಗಿದ್ದು ಇಂತಹ ಹೇಳಿಕೆ ಅವರ ಘನತೆಗೆ ತಕ್ಕದ್ದಲ್ಲ ಎಂದು ವಿಜಯ್ ವರ್ಗೀಯ ಹೇಳಿದ್ದಾರೆ. ಬಹುಶಃ ಹಮೀದ್ ಅನ್ಸಾರಿ ಅವರು ನಿವೃತ್ತಿಯ ನಂತರ ರಾಜಕೀಯ ಆಶ್ರಯ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎನಿಸುತ್ತಿದೆ ಎಂದು ಹೇಳಿದ್ದಾರೆ.

ಇನ್ನು ಮುಂದಿನ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ವೆಂಕಯ್ಯ ನಾಯ್ಡು ಅವರು ಹಮೀದ್ ಅನ್ಸಾರಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಅಭಿವೃದ್ಧಿಯೇ ರಾಜಕೀಯದ ಅಜೆಂಡಾ ಆಗಬೇಕೆಂದು ಹೇಳಿರುವ ವೆಂಕಯ್ಯ ನಾಯ್ಡು, ಭಾರತವು ಅತ್ಯಂತ ಹೆಚ್ಚು ಸಹಿಷ್ಣು ರಾಷ್ಟ್ರವೆಂದು ಬಣ್ಣಿಸಿದ್ದಾರೆ. ಜನರು ಅಲ್ಪಸಂಖ್ಯಾತ ಸಮಸ್ಯೆಗಳನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತಿದ್ದು, ಭಾರತವನ್ನು ದೂಷಿಸುವುದಕ್ಕೆ ಬಳಸುತ್ತಿದ್ದಾರೆ ಎಂದು ಆರೋಪಿಸಿದರು.

ಉಪ ರಾಷ್ಟ್ರಪತಿಯಾಗಿ ಹಮೀದ್ ಅನ್ಸಾರಿಯವರ ಅವಧಿ ಗುರುವಾರಕ್ಕೆ ಮುಕ್ತಾಯವಾಗುತ್ತದೆ. ಈ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ದೇಶದ ಮುಸ್ಲಿಮರಲ್ಲಿ ಅಸುರಕ್ಷತೆಯ ಭಾವವಿದೆ ಎಂದು ಹೇಳಿದ್ದರು.