ಬಿಜೆಪಿ ಸೇರಲಿದ್ದಾರಾ ಮುಲಾಯಂ ಸೊಸೆ?

ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರ ಎರಡನೇ ಸೊಸೆ ಅಪರ್ಣಾ ಯಾದವ್ ಬಿಜೆಪಿಗೆ ಸೇರುವ ಸಾಧ್ಯತೆಗಳಿವೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡುತ್ತಿವೆ. ಉತ್ತರಪ್ರದೇಶದ ಸದ್ಯದ ರಾಜಕೀಯ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಈ ಊಹಾಪೋಹಗಳು ಹುಟ್ಟಿಕೊಂಡಿವೆ.

ಅಪರ್ಣಾ ಅವರ ಎನ್‌ಜಿಒ ನಡೆಸುತ್ತಿರುವ ಕನ್ಹಾ ಉಪಾವನ(ಗೋಶಾಲೆ) ಕ್ಕೆ ಶುಕ್ರವಾರ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿಗೆ ಸೇರುವ ಸಾಧ್ಯತೆ ಇದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಅಪರ್ಣಾ ಉತ್ತರಿಸುತ್ತಾ, ಸಮಯ ಬಂದಾಗ ಹೇಳುತ್ತೇನೆ, ರಾಜಕೀಯದಲ್ಲಿ ಏನಾದರೂ ಆಗಬಹುದು, ಈಗಲೇ ಏನೂ ಹೇಳಲಾರೆ ಎಂದರು.

ಬಿಜೆಪಿ ಸೇರ್ಪಡೆ ಕುರಿತ ಪ್ರಶ್ನೆಯನ್ನು ಆಕೆ ಖಂಡಿಸಲಿಲ್ಲ, ಬದಲಾಗಿ ಸಮಯ ಬಂದಾಗ ಹೇಳುತ್ತೇನೆ ಎಂದರು. ಹೀಗಾಗಿ ಈ ಊಹಾಪೋಹಗಳಿಗೆ ಮತ್ತಷ್ಟು ಬಲ ಬಂದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಲಕ್ನೋ ಕಂಟೋನ್ಮೆಂಟ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಪರ್ಣಾ, ಬಿಜೆಪಿ ಅಭ್ಯರ್ಥಿ ರೀಟಾ ಬಹುಗುಣ ಅವರ ವಿರುದ್ಧ ಸೋಲು ಕಂಡಿದ್ದರು. ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ನಂತರ ಅಪರ್ಣಾ ತನ್ನ ಪತಿ ಪ್ರತೀಕ್ ಯಾದವ್ ಅವರೊಂದಿಗೆ ಇತ್ತೀಚೆಗೆ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.