ಕಾಶ್ಮೀರ ಸಮಸ್ಯೆ ಬಗೆಹರಿಸಲು ಚೀನಾ, ಅಮೆರಿಕಾ ನೆರವು ಕೇಳಿ: ಫಾರೂಕ್ ಅಬ್ದುಲ್ಲಾ

ಅಮೆರಿಕಾ, ಚೀನಾದಂತಹ ಮೂರನೇ ದೇಶಗಳು ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಮಧ್ಯ ಪ್ರವೇಶಿಸಬೇಕು ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. ಭಾರತಕ್ಕೆ ವಿಶ್ವದಲ್ಲಿ ಹಲವು ಮಿತ್ರ ದೇಶಗಳಿದ್ದು, ಅವುಗಳನ್ನು ಕಾಶ್ಮೀರ ಸಮಸ್ಯೆ ಕುರಿತಂತೆ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಮಧ್ಯವರ್ತಿಗಳಾಗಿ ವ್ಯವಹರಿಸಿ ಸಮಸ್ಯೆ ಇತ್ಯರ್ಥಗೊಳಿಸಲು ನೆರವು ಕೋರಬಹುದು ಎಂದು ಅವರು ಹೇಳಿದ್ದಾರೆ.

ಈಗಾಗಲೇ ಕಾಶ್ಮೀರ ಸಮಸ್ಯೆ ಇತ್ಯರ್ಥಗೊಳ್ಳಬೇಕೆಂಬ ಬಯಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಕೂಡಾ ವ್ಯಕ್ತಪಡಿಸಿದ್ದಾರೆ. ಚೀನಾ ಸಹಾ ಕಾಶ್ಮೀರ ವಿಷಯದಲ್ಲಿ ಮಧ್ಯಪ್ರವೇಶಕ್ಕೆ ಆಸಕ್ತಿ ತೋರಿದೆ. ಯಾರಿಂದಾದರೂ ಸಮಸ್ಯೆ ಬಗೆಹರಿಸಲು ನೆರವು ಕೇಳಬೇಕು ಎಂದು ಅಬ್ದುಲ್ಲಾ ಹೇಳಿದ್ದಾರೆ.

ಚೀನಾದೊಂದಿಗೆ ಭಾರತ ಯುದ್ಧ ಬಯಸದೇ ಇದ್ದ ಪಕ್ಷದಲ್ಲಿ, ಚೀನಾದೊಂದಿಗೆ ಮಾತುಕತೆಗೆ ಭಾರತ ಸಿದ್ಧವಿದ್ದರೆ, ಚೀನಾ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬಹುದು ಎಂದು ಅವರು ಹೇಳಿದ್ದಾರೆ.

ಫಾರೂಕ್ ಅಬ್ದುಲ್ಲಾ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಕಾಶ್ಮೀರ ಭಾರತದ ಆಂತರಿಕ ವಿಚಾರ ಎಂದು ಹೇಳಿದ್ದಾರೆ.